Home News ರೈತರಿಂದ ರಸ್ತೆ ತಡೆ

ರೈತರಿಂದ ರಸ್ತೆ ತಡೆ

0

ತಾಲ್ಲೂಕಿನ ಬಚ್ಚಹಳ್ಳಿ ಮತ್ತು ಬೊಮ್ಮನಹಳ್ಳಿ ಗೇಟ್ ಬಳಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರೈತರ ಬೆಳೆ ನಾಶವಾಗುತ್ತಿದೆ ಎಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಿಪರೀತ ಧೂಳಿನಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ಬೆಳೆ ನಾಶವಾಗುತ್ತಿದೆ. ರೈತರ ಲಕ್ಷಾತರ ರೂಗಳ ಬೆಳೆ ಹಾಳಾಗುತ್ತಿದೆ. ಸೂಕ್ತ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದೆ, ವಿಳಂಬವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ರೈತರು ಕಿಡಿಕಾರಿದರು.
ಗೌರಿಬಿದನೂರಿನಿಂದ ಶ್ರೀನಿವಾಸಪುರದವರೆಗೆ ರಾಷ್ಟ್ರೀಯ ಹೆದ್ದಾರಿ 234 ರ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕೆರೆ ಮಣ್ಣನ್ನು ತಂದು ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ನಾಲ್ಕು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿದರು.
ಅತ್ಯಲ್ಪ ನೀರಿನಲ್ಲಿ ಈ ಭಾಗದ ರೈತರು ಕಷ್ಟಪಟ್ಟು ರೇಷ್ಮೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಈ ರಸ್ತೆಯ ಧೂಳಿನಿಂದ ಹಿಪ್ಪುನೇರಳೆ ಸೊಪ್ಪು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಸೊಪ್ಪು ದನದ ಮೇವಿಗೂ ಉಪಯುಕ್ತವಾಗಿಲ್ಲ. ರೈತರ ಈ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ಕೊಡಿಸಬೇಕೆಂದು ಪಟ್ಟುಹಿಡಿದರು. ತಲದುಮ್ಮನಹಳ್ಳಿಯಲ್ಲಿ ಪೈಪ್ಲೈನ್ ಕತ್ತರಿಸಲಾಗಿದೆ. ಇದರಿಂದ ಜನರಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ನಿಂತು ಹೋಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಬೇಕೆಂದು ಪಟ್ಟುಹಿಡಿದ ರೈತರನ್ನು ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ಸಮಾಧಾನ ಹೇಳಿ ಠಾಣೆಯಲ್ಲಿ ಕರೆಸಿ ಮಾತನಾಡೋಣ ಎಂದು ಮನವೊಲಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಟಿ.ಕೃಷ್ಣಪ್ಪ, ಆನೂರು ದೇವರಾಜು, ತಲದುಮ್ಮನಹಳ್ಳಿ ದೇವರಾಜು, ಪ್ರಭಾಕರ್, ರವಿ, ಕೆಂಪರೆಡ್ಡಿ, ಸೊಣ್ಣೇಗೌಡ, ಮುನಿರಾಜು, ಬಚ್ಚಹಳ್ಳಿ ಶ್ರೀನಿವಾಸ್, ಗೋವಿಂದಪ್ಪ, ಮುನಿಶಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.