ತಾಲ್ಲೂಕಿನ ಅಮರಾವತಿಯ ಬಳಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ರೈತರ ಭೂಮಿಗಳನ್ನು ಉಳಿಸಬೇಕು ಎಂದು ಪುಟ್ಟಣ್ಣಯ್ಯ ಬಣದ ರೈತ ಮುಖಂಡರು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ಸಂಸದ ಕೆ.ಎಚ್.ಮುನಿಯಪ್ಪ ಅವರ ನಿವಾಸದಲ್ಲಿ ಸೋಮವಾರ ಮನವಿ ಮಾಡಿದ ರೈತ ಸಂಘದ ಮುಖಂಡರು, ಮೊದಲು ಸುಂಡ್ರಹಳ್ಳಿಯ ಸರ್ವೆ ನಂಬರ್ 1 ರಲ್ಲಿ 102 ಎಕರೆ, ಕಲ್ಯಾಪುರ ಗ್ರಾಮದ ಸರ್ವೆ ನಂಬರ್ 6 ರಲ್ಲಿ 70 ಎಕರೆ ಭೂ ಪರಿವರ್ತನೆ ಆಗಿತ್ತು. ಈ ಭಾಗದಲ್ಲಿ ಕೆಲವು ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿಗಳು ಖರೀದಿ ಮಾಡಿಕೊಂಡಿರುವುದರಿಂದ ರಾಜಕೀಯ ಪ್ರಭಾವ ಬಳಸಿಕೊಂಡು ಇಲ್ಲಿಂದ ಅಮರಾವತಿ ಗ್ರಾಮದ ಸರ್ವೆ ನಂಬರ್ 47 ರಲ್ಲಿ ರೈತರು 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿರುವ 52 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಹುನ್ನಾರಗಳು ನಡೆದಿವೆ. ಇಲ್ಲಿರುವ ರೈತರಿಗೆ ತಲಾ ೨ ಎಕರೆ ಭೂಮಿಯಿದೆ. ಈ ಭೂಮಿಯನ್ನು ವಶಪಡಿಸಿಕೊಂಡರೆ ರೈತರು ಬೀದಿಗೆ ಬೀಳುತ್ತಾರೆ ಜೀವನ ಕಷ್ಟವಾಗಲಿದೆ. ಆದ್ದರಿಂದ ಬೈರಸಂದ್ರದ ಬಳಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದೆಂದು ತಿಳಿದು ಬಂದಿದೆ. ಆದ್ದರಿಂದ ಅಮರಾವತಿ ಗ್ರಾಮದ ರೈತರ ಭೂಮಿಯನ್ನು ಬಿಟ್ಟು ಸರ್ಕಾರಿ ಭೂಮಿಗಳಲ್ಲಿ ಕಟ್ಟಡ ನಿರ್ಮಾಣ ಮಾಡಿಸಿ ಎಂದು ಒತ್ತಾಯಿಸಿದರು.
ತಾಲ್ಲೂಕಿನ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಬಹಳಷ್ಟು ಸಭೆಗಳನ್ನು ನಡೆಸಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಅದನ್ನು ಸ್ಥಾಪನೆ ಮಾಡುವುದರಿಂದ ರೈತರ ಮಕ್ಕಳು ಸೇರಿದಂತೆ ಲಕ್ಷಾಂತರ ಜನರ ಭವಿಷ್ಯ ರೂಪುಗೊಳ್ಳಲಿದೆ. ರೈತರಿಗೆ ಪರ್ಯಾಯ ಭೂಮಿ ಕೊಡಬೇಕಾ ಅಥವಾ ಭೂಮಿಯನ್ನು ಕೊಟ್ಟ ರೈತರ ಕುಟುಂಬಗಳಲ್ಲಿನ ಒಬ್ಬರಿಗೆ ಉದ್ಯೋಗ ಕೊಡಬೇಕಾ ಎನ್ನುವ ಕುರಿತು ಆಲೋಚನೆ ಮಾಡುತ್ತಿದ್ದೇವೆ. ರೈತರು ಸಂಯಮದಿಂದ ಸಹಕಾರ ನೀಡಿ ಎಂದರು.
ದೂರವಾಣಿಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರೊಂದಿಗೆ ಮಾತನಾಡಿದ ಸಂಸದ ಕೆ.ಎಚ್.ಮುನಿಯಪ್ಪ, ರೈತರ ಭೂಮಿಗಳನ್ನು ಕೈ ಬಿಡುವಂತೆ ಬಂದು ಮನವಿ ಮಾಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಂಡು ಮತ್ತೊಮ್ಮೆ ಪರಿಶೀಲನೆ ನಡೆಸಿ, ರೈತರು, ತಹಶೀಲ್ದಾರ್, ಭೂಮಾಪನ ಇಲಾಖೆ ಅಧಿಕಾರಿಗಳು ಸಭೆ ಆಯೋಜನೆ ಮಾಡಿ ಚರ್ಚೆ ನಡೆಸುವಂತೆ ಸಲಹೆ ನೀಡಿದರು.
ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ಮುನಿಕೆಂಪಣ್ಣ ಹಾಜರಿದ್ದರು.