ಡಿ.ಸಿ.ಸಿ.ಬ್ಯಾಂಕಿನಲ್ಲಿ ಪಡೆದುಕೊಳ್ಳುವ ಸಾಲ ಸೌಲಭ್ಯಗಳನ್ನು ರೈತರು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳ ಉಳಿವು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಡಿ.ಸಿ.ಸಿ.ಬ್ಯಾಂಕ್ ಶಿಡ್ಲಘಟ್ಟ ಶಾಖೆ, ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದಿಂದ ಕೆ.ಸಿ.ಸಿ.ಸಾಲ ಮತ್ತು ಮಹಿಳಾ ಸಂಘಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿ.ಸಿ.ಸಿ.ಬ್ಯಾಂಕ್ ಕೇವಲ ಮಹಿಳೆಯರಿಗಷ್ಟೆ ಅಲ್ಲದೆ ರೈತರ ಕೃಷಿ ಉದ್ದೇಶಗಳಿಗೂ ಸಾಲ ನೀಡುತ್ತಿದೆ. ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಕಡೆಗೆ ರೈತರಿಗೆ ಬದ್ದತೆ ಬೇಕು. ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ರೈತರಿಗೆ 2.3 ಕೋಟಿ ಮಹಿಳಾ ಸಂಘಗಳಿಗೆ 70 ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ. ರೈತರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವ್ಯವಹರಿಸುವುದರ ಬದಲಿಗೆ ಸಹಕಾರಿ ಬ್ಯಾಂಕುಗಳಲ್ಲೆ ಖಾತೆ ತೆರೆದು ವ್ಯವಹರಿಸಬೇಕು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸಂಘಗಳು ಉತ್ತಮವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಸರ್ಕಾರ ಹಣಕೊಡಲ್ಲ, ಸ್ವಂತ ಹಣದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ವಾರದ ಸಭೆಗಳನ್ನು ಮಾಡುವ ಮೂಲಕ ಸಂಘಟಿತರಾಗಬೇಕು ಎಂದರು.
ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ, ಬಡ್ಡಿಯಿಲ್ಲದೆ ಸಾಲವಾಗಲಿದೆ, ಅವಧಿ ಮೀರಿದರೆ ಬಡ್ಡಿ ಸಮೇತ ಪಾವತಿ ಮಾಡಬೇಕಾಗುತ್ತದೆ. ಉದ್ದೇಶಿತ ಯೋಜನೆಗೆ ಸಾಲ ಉಪಯೋಗವಾಗಬೇಕು. ಮಹಿಳೆಯರು ಹಾಗೂ ರೈತರು ಸಾಲ ಪಡೆದುಕೊಂಡು ಅದರಿಂದ ಆರ್ಥಿಕ ಅಭಿವೃದ್ಧಿ ಹೊಂದುವ ಕಡೆಗೆ ಗಮನಹರಿಸಬೇಕು. ಡಿ.ಸಿ.ಸಿ.ಬ್ಯಾಂಕಿನಿಂದ ೪೫೦. ಕೋಟಿ, ಕೆ.ಸಿ.ಸಿ ಸಾಲ ೩೫೦ ಕೋಟಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಿದೆ. ಜನರು ರಾಷ್ಟ್ರೀಕೃತ ಬ್ಯಾಂಕುಗಳ ಕಡೆಗೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಡಿ.ಸಿ.ಸಿ.ಬ್ಯಾಂಕಿನಲ್ಲಿ ವ್ಯವಹರಿಸಬೇಕು ಎಂದರು.
ರೈತರಿಗೆ ಕೆ.ಸಿ.ಸಿ.ಸಾಲ, ಮಹಿಳಾ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ. ಶಿವಾರೆಡ್ಡಿ, ಹನುಮೇಗೌಡ, ಶ್ರೀರಾಮರೆಡ್ಡಿ, ಮಳ್ಳೂರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಎಂ.ವೆಂಕಟರೆಡ್ಡಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಆರ್.ಮುನಿಕೃಷ್ಣಪ್ಪ, ಮುನಿರಾಜು, ವಿ.ಶಾಂತಮ್ಮ, ಕೆ.ಪದ್ಮ, ಸಂಜೀವಮ್ಮ, ಎಚ್.ವಿ.ರಾಮಕೃಷ್ಣಪ್ಪ, ಕೃಷ್ಣಪ್ಪ, ವ್ಯವಸ್ಥಾಪಕರಾದ ಜಗನ್ನಾಥ್, ಆನಂದ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -