Home News ರೈತರೊಂದಿಗೆ ಬೆಸ್ಕಾಂ ಅಧಿಕಾರಿಗಳ ಸಭೆ

ರೈತರೊಂದಿಗೆ ಬೆಸ್ಕಾಂ ಅಧಿಕಾರಿಗಳ ಸಭೆ

0

ನಗರ ಸೇರಿದಂತೆ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ಈ ಹಿಂದೆ ರೈತರು ಪ್ರತಿಭಟಿಸಿ ಮೀಟರ್ ಹಿಂತಿರುಗಿಸಿದ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಬುಧವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಎಂಜಿನಿಯರ್ ಪರಮೇಶ್, ‘ನಗರ ಹಾಗೂ ಸುತ್ತಮುತ್ತ ವಿದ್ಯುತ್ ಉಪಕರಣಗಳು, ಟ್ರಾನ್ಸ್ಫಾರ್ಮರ್ ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ ಸುಮಾರು 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಸಿದ್ದೇವೆ. ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿದ್ದೆವು. ಆದರೆ ರೈತರಿಂದ ಹಣ ಪಡೆಯುವುದಿಲ್ಲ’ ಎಂದು ತಿಳಿಸಿದರು.
ಸಭೆಯಲ್ಲಿದ್ದ ರೈತರೆಲ್ಲ ಯಾವುದೇ ಕಾರಣಕ್ಕೂ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಲು ಬಿಡುವುದಿಲ್ಲ. ಈ ದಿನ ಹಣ ಪಡೆಯುವುದಿಲ್ಲವೆಂದು ಹೇಳಿ ಮುಂಬರುವ ದಿನಗಳಲ್ಲಿ ಯೂನಿಟ್ ಇಂತಿಷ್ಟು ನೀಡಬೇಕೆಂದು ಹೇಳುತ್ತೀರಿ. ಹಾಗಾಗಿ ನಾವು ಮೀಟರ್ ಅಳವಡಿಸುವುದನ್ನು ವಿರೋಧಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ನಡೆದ ವಿವರದ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ಹೇಳಿದರು. ಅಸಿಸ್ಟೆಂಟ್ ಎಂಜಿನಿಯರ್ ರಮೇಶ್, ಜ್ಯೂನಿಯರ್ ಎಂಜಿನಿಯರ್ ಅನ್ಸರ್ ಪಾಷ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಕೃಷ್ಣಪ್ಪ, ವೇಣುಗೋಪಾಲ್, ನಾರಾಯಣಸ್ವಾಮಿ, ಬಚ್ಚರೆಡ್ಡಿ, ವೆಂಕಟೇಗೌಡ, ಆರ್.ದೇವರಾಜ್, ದ್ಯಾವಪ್ಪ, ರಾಮಕೃಷ್ಣಪ್ಪ, ಅಶ್ವತ್ಥ್, ಅನಂತು, ಹರೀಶ್, ಶಂಕರ್, ರಾಘವೇಂದ್ರ, ಕೇಶವಮೂರ್ತಿ, ಶ್ರೀನಾಥ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.