Home News ರೈತರ ಹಿತ ಕಾಪಾಡಬೇಕೆಂದು ರೇಷ್ಮೆ ಆಯುಕ್ತರಿಗೆ ಮನವಿ

ರೈತರ ಹಿತ ಕಾಪಾಡಬೇಕೆಂದು ರೇಷ್ಮೆ ಆಯುಕ್ತರಿಗೆ ಮನವಿ

0

ನಗರದ ರೇಷ್ಮೆ ಗೂಡು ವಹಿವಾಟಿಗೆ ಸಂಬಂಧಿಸಿದಂತೆ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ರೇಷ್ಮೆ ಇಲಾಖೆಯ ಆಯುಕ್ತರಿಗೆ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನ ರೀಲರ್ಗಳು ಮಾರುಕಟ್ಟೆಯಲ್ಲಿನ ಇ–ಹರಾಜು ಪದ್ಧತಿ ನಿಲ್ಲಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿಯಿಂದ ರೇಷ್ಮೆ ಗೂಡು ಮಾರುಕಟ್ಟೆಯ ವಹಿವಾಟು ನಿಂತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದ್ದು ತಾವು ಬೆಳೆದ ಗೂಡಿನ ವಹಿವಾಟಿಗಾಗಿ ಬೇರೆ ತಾಲ್ಲೂಕಿನ ಮಾರುಕಟ್ಟೆಗೆ ಹೋಗಬೇಕಾಗಿದೆ.
ಈ ಬಗ್ಗೆ ಗುರುವಾರ ಮಾರುಕಟ್ಟೆಯಲ್ಲಿ ರೈತರ ಸಭೆ ನಡೆಸಿ, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಸೇರಿದಂತೆ ರೈತರ ಹಾಗು ರೀಲರ್ಗಳ ನಡುವೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಶುರುಮಾಡಿರುವ ಇ–ಹರಾಜು ಪ್ರಕ್ರಿಯೆ ಉತ್ತಮವಾಗಿದೆ. ಪ್ರಸ್ತುತ ಇ-ಹರಾಜಿನಲ್ಲಿರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ರೈತ ಮುಖಂಡರು ಸೇರಿದಂತೆ ರೀಲರ್ ಪ್ರತಿನಿಧಿಗಳ ಸಭೆ ನಡೆಸಿ ಮುಕ್ತ ಚರ್ಚೆಯ ಮೂಲಕ ಸರಿಪಡಿಸಲು ಕ್ರಮ ಜರುಗಿಸುವುದರೊಂದಿಗೆ ಇ-ಹರಾಜು ಪದ್ಧತಿ ಮುಂದುವರೆಸಬೇಕು.
ಇಲಾಖೆಯು ಈ ಕೂಡಲೇ ಮಾರುಕಟ್ಟೆ ವಹಿವಾಟು ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶ ಮಾಡಿ ಸರ್ಕಾರಿ ಫಿಲೇಚರ್ಗಳಿಗೆ ರೇಷ್ಮೆ ಗೂಡನ್ನು ಖರೀದಿಸುವ ವ್ಯವಸ್ಥೆ ಮಾಡಬೇಕು. ಶಿಡ್ಲಘಟ್ಟ, ಕೋಲಾರ, ವಿಜಯಪುರ ಮುಂತಾದ ಕಡೆ ನೂತನ ಸರ್ಕಾರಿ ಫಿಲೇಚರ್ ಸ್ಥಾಪಿಸಲು ಮುಂದಾಗುವ ಮೂಲಕ ತಾಲ್ಲೂಕಿನ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮೂಲಕ ರೇಷ್ಮೆ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಗೌರವಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕಾರ್ಯಾಧ್ಯಕ್ಷ ಮಳ್ಳೂರುಹರೀಶ್, ಹಿತ್ತಲಹಳ್ಳಿ ಗೋಪಾಲಗೌಡ, ರೈತ ಮುಖಂಡರಾದ ರಾಮಕೃಷ್ಣಪ್ಪ, ತಾದೂರು ಮಂಜುನಾಥ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.