Home News ರೈತ ಮುಖಂಡರಿಂದ ಹಣ ದುರ್ಬಳಕೆ : ಆರೋಪ

ರೈತ ಮುಖಂಡರಿಂದ ಹಣ ದುರ್ಬಳಕೆ : ಆರೋಪ

0

‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ಸದಸ್ಯರು ಸರ್ಜಿ ಸಲ್ಲಿಕೆ ನೆಪದಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ‘ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿದಿರುವುದು ಸ್ವಾಗತಾರ್ಹ. ಆದರೆ ಸಾಲಗಾರ ರೈತರಿಗೆ ಅರ್ಜಿ ನೀಡಿ ಅದನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲು ಪ್ರತಿ ಅರ್ಜಿಗೆ 50 ರೂ ಶುಲ್ಕ ಪಡೆಯಲಾಗಿದೆ. ಹಲವು ಲಕ್ಷ ರೂಗಳ ಹಣ ಸಂಘದಿಂದ ಸಂಗ್ರಹಿಸಲಾಗಿದ್ದು, ರೈತ ಸಂಘದಿಂದ ಯಾರಿಗೂ ರಸೀದಿ ನೀಡಿಲ್ಲ’ ಎಂದು ದೂರಿದ್ದಾರೆ.
ಜಿಲ್ಲೆಯಾದ್ಯಂತ ಹೀಗೆ ಐವತ್ತು ಸಾವಿರ ಅರ್ಜಿಗಳನ್ನು ವಿತರಿಸಿ ಹಣ ಗಳಿಕೆಯ ದಂಧೆ ಮಾಡಿಕೊಳ್ಳಲಾಗಿದೆ. ವಿತರಿಸಿರುವ ಅರ್ಜಿಯಲ್ಲಿ ಸಂಘದ ಹೆಸರಿಲ್ಲ. ಈ ರೀತಿ ಹಣ ವಸೂಲಿ ಮಾಡುವುದು ಮೋಸದ ಕೆಲಸವಾಗಿದೆ. ರೈತ ಸಂಘದ ಹೆಸರಿನಲ್ಲಿ ರೈತರಿಗೆ ಮಾಡಿದ ದ್ರೋಹ ಮಹಾ ಮೋಸವಾಗಿದೆ.
ಈ ಬಗ್ಗೆ ಗೊಂದಲ ಹೊಂದಿರುವ ಕೆಲ ರೈತರು ನಮಗೆ ಕರೆ ಮಾಡುತ್ತಿದ್ದಾರೆ. ನಿಜವಾಗಿಯೂ ರೈತ ಪರ ಕಾಳಜಿ ಇದ್ದರೆ ಯಾವುದೇ ಹಣ ವಸೂಲಿ ನಡೆಸದೆ ಹೋರಾಟ ನಡೆಸಲಿ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಆಗಸ್ಟ್ 22 ರಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಚೇರಿಯವರೆಗೂ ಪಾದಯಾತ್ರೆ ಮಾಡಿ ರೈತರ ಸಾಲವನ್ನು ರಾಷ್ಟ್ರೀಕೃತ ಹಾಗೂ ಸಹಕಾರ ಸಂಘ ಬ್ಯಾಂಕ್ ಗಳಲ್ಲಿ ಸಂಪೂರ್ಣವಾಗಿ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ನೀಡಿರುತ್ತೇವೆ ಎಂದು ತಿಳಿಸಿದ್ದಾರೆ.
ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ತಾಲ್ಲೂಕು ಘಟಕದ ಅಧರ್ಯಕ್ಷ ರವಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್ ಹಾಗೂ ಇತರ ಸದಸ್ಯರು ಪ್ರಕಟಣೆಯಲ್ಲಿ ಸಹಿ ಹಾಕಿದ್ದಾರೆ.