Home News ರೈತ ಸಂಘದಿಂದ ರೈತರಿಗೆ ಉಚಿತವಾಗಿ ಮೇವು ವಿತರಣೆ

ರೈತ ಸಂಘದಿಂದ ರೈತರಿಗೆ ಉಚಿತವಾಗಿ ಮೇವು ವಿತರಣೆ

0

ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ತುರ್ತಾಗಿ ಆಗಬೇಕಿದೆ. ಹಬ್ಬದ ಸಂಭ್ರಮವನ್ನು ಆಚರಿಸುವ ಮನಸ್ಥಿತಿಯಲ್ಲಿ ರೈತರಿಲ್ಲ. ಒಂದೆಡೆ ವರುಣನ ಮುನಿಸು, ಮತ್ತೊಂದೆಡೆ ಕುಸಿದ ಅಂತರ್ಜಲ. ಆದರೂ ಬೇವು ಬೆಲ್ಲ ಸವಿಯುವಂತೆ ಕಷ್ಟ ಸುಖವನ್ನು ಸಮನಾಗಿ ಸ್ವೀಕರಿಸಬೇಕಿದೆ. ರೈತರು ಎದೆಗುಂದಬಾರದು ಎಂದು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ತಿಳಿಸಿದರು.
ನಗರದ ವಿಜಯನಗರ ಹೆಬ್ಬಾಗಿಲ ಹತ್ತಿರದ ಅರಳೀಕಟ್ಟೆಯ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ದಾನಿಗಳಿಂದ ಸಂಗ್ರಹಿಸಿದ ಎಂಟು ಟನ್‌ ಹಸಿ ಮೇವನ್ನು ರೈತರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಎಲ್ಲೇ ಇದ್ದರೂ ರೈತರೇ. ನಮಗೆ ನಗರ ಪ್ರದೇಶದ ರೈತರು ಹಾಗೂ ಗ್ರಾಮೀಣ ಭಾಗದ ರೈತರು ಎಂಬ ಬೇಧವಿಲ್ಲ. ಮೊದಲ ಹಂತದಲ್ಲಿ ನಾವು ಮೇವನ್ನು ನಗರ ಪ್ರದೇಶಕ್ಕೆ ಶೇಖರಿಸಿಟ್ಟಿರಲಿಲ್ಲ. ಆದರೆ ಎರಡನೇ ಹಂತದ ಮೇವಿನಲ್ಲಿ 10 ಟನ್‌ ಶನಿವಾರ ಸರಬರಾಜು ಆಗಲಿದೆ. ಹಸಿ ಮೇವನ್ನು ಸರಬರಾಜು ಮಾಡುವುದಿಲ್ಲ, ಕೇವಲ ಒಣ ಮೇವನ್ನು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿರುವ ರೈತರಿಗೂ ಗ್ರಾಮೀಣ ಭಾಗದಂತೆಯೇ ಸಮನಾಗಿ ಕಾಣುವುದಾಗಿ, ಸೌಲಭ್ಯ ನೀಡುವುದಾಗಿ ಹೇಳಿದರು.

ಶಿಡ್ಲಘಟ್ಟದ ವಿಜಯನಗರ ಹೆಬ್ಬಾಗಿಲ ಹತ್ತಿರದ ಅರಳೀಕಟ್ಟೆಯ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬುಧವಾರ ಯುಗಾದಿ ಹಬ್ಬದ ಪ್ರಯುಕ್ತ ದಾನಿಗಳಿಂದ ಸಂಗ್ರಹಿಸಿದ ಹಸಿ ಮೇವನ್ನು ರೈತರಿಗೆ ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ವಿತರಿಸಿದರು.

ಈ ಸಂದರ್ಭದಲ್ಲಿ ದಾನಿಗಳಾದ ಗುಡಿಸೋರು ನಾರಾಯಣಸ್ವಾಮಿ, ಎಲ್‌.ಹರೀಶ್‌, ವೈ.ರಾಮಕೃಷ್ಣಪ್ಪ, ಕೆ.ವಿ.ವೇಣುಗೋಪಾಲ್‌, ಎಸ್‌.ರಾಘವೇಂದ್ರ, ಪೊನ್ನು ನಾಗರಾಜು, ಬಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಗೌಡ, ಎ.ಡಿ.ಶ್ರೀಧರ್‌, ವಿಶ್ವನಾಥ್‌, ಪಿ.ವಿ.ದೇವರಾಜ್‌, ಬಚ್ಚೇಗೌಡ, ಆಂಜಿನಪ್ಪ ಮತ್ತು ರೈತ ಸಂಘದ ಸದಸ್ಯರು ಸಂಗ್ರಹಿಸಿ ಕೊಟ್ಟಿದ್ದ ಸುಮಾರು ಎಂಟು ಟನ್‌ ಹಸಿ ಮೇವನ್ನು ಉಚಿತವಾಗಿ ಅಗತ್ಯವಿರುವ ರೈತರಿಗೆ ವಿತರಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘ ಈ ಸ್ಥಳದಲ್ಲಿ ಅಗತ್ಯವಿದೆ, ಅದನ್ನು ಮಾಡಲು ಅನುಮತಿ ನೀಡಿ ಸಹಕರಿಸಬೇಕೆಂದು ಮಹಿಳೆಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಯುಗಾದಿ ಹಬ್ಬದ ಪ್ರಯುಕ್ತ ಅರಳಿ ಕಟ್ಟೆಯಲ್ಲಿ ಹಬ್ಬದ ಸಂಪ್ರದಾಯದಂತೆ ಹೊಸ ನೇಗಿಲು, ಹಸಿ ಮೇವು, ಪಂಚ ಧಾನ್ಯಗಳ ಪೈರನ್ನು ಇಟ್ಟು ಪೂಜಿಸಲಾಯಿತು. ಹೆಸರು ಬೇಳೆ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು. ಬೇವು ಬೆಲ್ಲವನ್ನು ಹಂಚಲಾಯಿತು.
ಪಶುಸಂಗೋಪನಾ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಗೌರವಾಧ್ಯಕ್ಷ ಎಸ್‌.ಎಂ.ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ಬಿ. ನಾರಾಯಣಸ್ವಾಮಿ, ವೇಣುಗೋಪಾಲ್‌, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಏಜಾಜ್, ಪಿ.ವಿ.ದೇವರಾಜ್‌, ಹರೀಶ್‌, ನಾರಾಯಣಪ್ಪ, ಗಂಗಾಧರ್‌, ವಿಶ್ವನಾಥ್‌, ದೇವರಾಜ್‌, ಆರ್‌.ಮಂಜುನಾಥ್‌, ವೆಂಕಟೇಶ್‌, ಸೊಣ್ಣಪ್ಪರೆಡ್ಡಿ, ನಂಜಪ್ಪ ಮತ್ತಿತರರು ಹಾಜರಿದ್ದರು.