Home News ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

0

ತಾಲ್ಲೂಕಿನ ಸಾದಲಿಯಲ್ಲಿ ಕೃಷಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ಸಾದಲಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳನ್ನು ಯಶಸ್ವಿಗೊಳಿಸುವ ಹೊಣೆ ಅಧಿಕಾರಿ ವರ್ಗದ ಮೇಲಿದ್ದು, ಅವುಗಳು ಯಶಸ್ವಿಯಾದಾಗ ಮಾತ್ರ ಕೃಷಿಕರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ಕೃಷಿಕರಿಗೆ ಮಾರುಕಟ್ಟೆ ಅಭಾವ, ಕೂಲಿ ಕಾರ್ಮಿಕರ ಕೊರತೆ ಹಾಗೂ ಕೃಷಿ ಲಾಭದಾಯಕವಾಗಿಲ್ಲದ ಕಾರಣದಿಂದಾಗಿ ಇಂದಿನ ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿದ್ದಾರೆ, ಇದನ್ನು ತಡೆಯುವ ಹಿನ್ನೆಲೆಯಲ್ಲಿ ಸರ್ಕಾರ ನೂತನ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಾದಲಿ ಗ್ರಾಮದಲ್ಲಿ ಸುಮಾರು 43 ಲಕ್ಷ ರೂಗಳ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕೇಂದ್ರವು ಸಂಪೂರ್ಣ ಕೃಷಿ ಮಾಹಿತಿಯಿಂದ ಕೂಡಿದ ಮಾಹಿತಿ ಕಣಜವಾಗಿ ಮಾರ್ಪಾಡಾಗಬೇಕು. ಈಗ ತಂತ್ರಜ್ಞಾನದ ಬೆಳವಣಿಗೆಯ ನೆರವು ಪಡೆದುಕೊಂಡು ಕೃಷಿ ಇಲಾಖೆಯು ರೈತರಿಗೆ ಪೂರಕ ಮಾಹಿತಿ ನೀಡಲು ಪ್ರಯತ್ನಿಸಬೇಕು. ಈ ಕೇಂದ್ರಗಳು ಬೀಜ ಮತ್ತು ಗೊಬ್ಬರದ ಮಾರಾಟ ಕೇಂದ್ರಗಳಾಗದೆ, ಇಲ್ಲಿರುವ ಸಿಬ್ಬಂದಿಗೆ ಹಾಗೂ ರೈತರಿಗೆ ಹೊಸ ತಂತ್ರಜ್ಞಾನದ ಕುರಿತು ತಿಳಿವಳಿಕೆ ನೀಡುವತ್ತ ಗಮನಹರಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ಉಪ ಕೃಷಿ ನಿರ್ದೇಶಕಿ ಪಂಕಜಾ, ಸಹಾಯಕ ಕೃಷಿ ನಿರ್ದೇಶಕ ಮುರಳೀಧರ್‌, ಎಇಇ ನಾರಾಯಣಸ್ವಾಮಿ, ಸಾದಲಿ ಗ್ರಾಮ ಪಂಚಾಯಿತಿ ಅಧ್ಕಕ್ಷ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗಮಣಿ ವೆಂಕಟೇಶ್‌, ಶಂಕರಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ತಾದೂರು ಮಂಜುನಾಥ್‌, ರವಿಪ್ರಕಾಶ್‌, ರೈತ ನಾರಾಯಣಸ್ವಾಮಿ, ರವಿನಾರಾಯಣರೆಡ್ಡಿ ಹಾಜರಿದ್ದರು.