Home News ಲೊಕೋಪಯೋಗಿ ಇಲಾಖೆಯ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ

ಲೊಕೋಪಯೋಗಿ ಇಲಾಖೆಯ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ

0

ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಸರ್ಕಾರಿ ಯೋಜನೆಯ ಸದ್ಬಳಕೆಯ ಬಗ್ಗೆ ಜನರು ಕಾಳಜಿ ವಹಿಸಬೇಕು ಹಾಗೂ ಗುಣಮಟ್ಟದ ಬಗ್ಗೆ ಗಮನಿಸುತ್ತಿರಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬೂದಾಳ ಮತ್ತು ವೀರಾಪುರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಎಸ್.ಸಿ.ಪಿ.ಮತ್ತು ಎಸ್.ಟಿ.ಪಿ ಯೋಜನೆಯಡಿ ಲೊಕೋಪಯೋಗಿ ಇಲಾಖೆಯ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಬುಧವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಲೊಕೋಪಯೋಗಿ ಇಲಾಖೆಯ ಮೂಲಕ ಎಸ್.ಸಿ.ಪಿ.ಮತ್ತು ಎಸ್.ಟಿ.ಪಿ ಯೋಜನೆಗಳಡಿಯಲ್ಲಿ ತಲಾ ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ೧೦ ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳನ್ನು ನಿರ್ಮಾಣ ಮಾಡಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಹಳ್ಳಿಗಳಲ್ಲಿ ಈಗಾಗಲೇ ಕಾಮಗಾರಿಗಳು ಮುಕ್ತಾಯವಾಗಿವೆ. ಒಟ್ಟು ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನಾಗರಿಕರು ಹಳ್ಳಿಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ವಿಚಾರಗಳಲ್ಲಿ ರಾಜಕೀಯವನ್ನು ಬೆರೆಸದೆ ಪಕ್ಷ ಬೇಧ ಮರೆತು ಸಹಕಾರ ನೀಡಬೇಕು. ಲಭ್ಯವಾಗುತ್ತಿರುವ ನೀರನ್ನು ಮಿತವಾಗಿ ಬಳಕೆ ಮಾಡುವುದರ ಜೊತೆಗೆ ಹಳ್ಳಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಕಡೆಗೂ ಹೆಚ್ಚಿನ ಆಸಕ್ತಿವಹಿಸಿದಾಗ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮುಖಂಡರಾದ ಮುನಿರೆಡ್ಡಿ, ಮಂಜುನಾಥ್, ಮಳ್ಳೂರಯ್ಯ ಮುಂತಾದವರು ಹಾಜರಿದ್ದರು.