Home News ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರ ಮೆರವಣಿಗೆ

ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರ ಮೆರವಣಿಗೆ

0

ಶಿಡ್ಲಘಟ್ಟದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡ ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ತಂತ್ರಗಾರಿಕೆಯಿಂದ ಇದುವರೆಗೂ ಜಯಗಳಿಸುತ್ತಿದ್ದ ಕೆ.ಎಚ್.ಮುನಿಯಪ್ಪ ಅವರಿಗೀಗ ಸೋಲುವ ಭೀತಿ ಬಂದಿದೆ ಹಾಗಾಗಿ ಇತರ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೆ.ಎಚ್.ಮುನಿಯಪ್ಪ ಅವರ ಕುತಂತ್ರದಿಂದ ಕೋಲಾರ ಲೋಕಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು ಬಲಿಪಶುಗಳಾಗಿದ್ದಾರೆ. ನಾನೂ ಸೇರಿದಂತೆ ಚಿಂತಾಮಣಿಯ ಸುಧಾಕರ್, ಕೋಲಾರದ ಕೆ.ಶ್ರೀನಿವಾಸಗೌಡ ಕಾಂಗ್ರೆಸ್ ಪಕ್ಷವನ್ನು ತೊರೆಯಲು ಕೆ.ಎಚ್.ಮುನಿಯಪ್ಪ ಅವರ ಕುತಂತ್ರ ರಾಜಕಾರಣ ಕಾರಣವಾಗಿದೆ. ಇದೀಗ ತಾನು ರಾಜಕೀಯವಾಗಿ ಬೆಳೆಯಲು ಬುನಾದಿ ಹಾಕಿಕೊಟ್ಟಂಥಹ ಶಿಡ್ಲಘಟ್ಟದ ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊರಟಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಆರು ಬಾರಿಯಿಂದ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡುತ್ತಾ ಬಂದಿದ್ದರೂ ಈ ಕ್ಷೇತ್ರಕ್ಕೆ ಯಾವ ಶಾಶ್ವತ ಕೊಡುಗೆಯನ್ನೂ ನೀಡಿಲ್ಲ. ಅವರ ಕೊಡುಗೆಯೇನಿದ್ದರೂ ಪಕ್ಷದಲ್ಲಿ ಬೆಳೆಯುವವರನ್ನು ಮೂಲೆಗುಂಪು ಮಾಡುವುದಾಗಿದೆ. ಅವರ ವರ್ಷಾನುಗಟ್ಟಲೆಯ ತಂತ್ರಗಾರಿಕೆಯು ಜನರಿಗೆ ಮನವರಿಕೆಯಾಗಿದೆ. ನರೇಂದ್ರ ಮೋದಿಯವರ ಅಲೆಯಲ್ಲಿ ಈ ಬಾರಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಜನರು ಕೆ.ಎಚ್.ಮುನಿಯಪ್ಪ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೀರಯ್ಯನವರು ಮೊದಲು ಮುನಿಸಿಕೊಂಡಿದ್ದು ನಿಜವೇ ಆದರೂ ನಮಗೆಲ್ಲಾ ಪಕ್ಷ ಹಾಗೂ ಅದರ ಸಿದ್ದಾಂತ ದೊಡ್ಡದೆಂದು ಈಗಾಗಲೇ ಪತ್ರಿಕಾ ಹೇಳಿಕೆಯನ್ನು ಅವರು ನೀಡಿದ್ದು, ನಾವೆಲ್ಲಾ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಾಗಿ ನುಡಿದರು.
ನರೇಂದ್ರಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಪ್ರಗತಿಯತ್ತ ಸಾಗಬೇಕೆಂಬ ಆಶಯದಿಂದ ಜನರು ಆಶೀರ್ವದಿಸುತ್ತಿದ್ದಾರೆಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರು ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮತಯಾಚಿಸಿದರು.
ಬಿ.ಜೆ.ಪಿ ಮುಖಂಡರಾದ ಕೃಷ್ಣಾರೆಡ್ಡಿ, ಸುರೇಂದ್ರಗೌಡ, ಶಿವಕುಮಾರಗೌಡ, ಸದಾಶಿವ, ಲೋಕೇಶ್ಗೌಡ, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ರಮೇಶ್ಬಾಯಿರಿ, ಕೆಂಪರೆಡ್ಡಿ, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!