Home News ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ

ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ

0

ತಾಲ್ಲೂಕಿನ ದ್ಯಾವಪ್ಪನಗುಡಿ (ಜಯಂತಿಗ್ರಾಮ) ಗ್ರಾಮದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿಬಂಧು ಜ್ಞಾನವಿಕಾಸ ಹಾಗೂ ಸ್ವ ಸಹಾಯ ಸಂಘಗಳ ಒಕ್ಕೂಟ ಬಶೆಟ್ಟಹಳ್ಳಿ ವಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಲೋಕ ಕಲ್ಯಾಣಾರ್ಥ ಹಾಗೂ ಕಾಲ ಕಾಲಕ್ಕೆ ಉತ್ತಮ ಮಳೆ ಬೆಳೆಗಳಾಗಲಿ ಎಂಬ ಉದ್ದೇಶದಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ರಾಜ್ಯಾದ್ಯಂತ ಇರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಧರ್ಮದ ಅಭಿವೃದ್ಧಿ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಶ್ರೀ ಸಾಯಿನಾಥ ಜ್ಞಾನಮಂದಿರದ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ಮಾತನಾಡಿ, ಇತ್ತೀಚೆಗೆ ಮನೆಗಳಲ್ಲಿ ಸತ್ಯನಾರಾಯಣ ಪೂಜೆಯಂತಹ ಆಚರಣೆಗಳು ಮಾಡುವುದು ತುಂಬಾ ವಿರಳವಾಗಿವೆ. ಕಾರಣ ಜನರಿಗೆ ಪೂಜೆ ಮಾಡಿಸುವ ಆಸಕ್ತಿಯಿರುತ್ತದೆಯಾದರೂ ಆರ್ಥಿಕ ಶಕ್ತಿಯಿರುವುದಿಲ್ಲ. ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಗ್ರಾಮಗಳಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಹಳ್ಳಿಗಳು ಸುಭೀಕ್ಷೆಯಾಗಿರಲಿ ಹಾಗೂ ಸಕಾಲದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಮೂರೂವರೆ ವರ್ಷದ ಅವಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇಷ್ಟೊಂದು ಮುಂದುವರೆಯಬೇಕಾದರೆ ಈ ಭಾಗದ ಜನರ ಪ್ರೋತ್ಸಾಹವೇ ಕಾರಣ ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನಮ್ಮ ಸೇವಾ ಪ್ರತಿನಿಧಿಗಳು ಭೇಟಿ ನೀಡಿ ಸ್ವಚ್ಚತೆ ಸೇರಿದಂತೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಕೆಲಸವನ್ನು ಮಾಡುತ್ತಾರೆ. ವಿಶೇಷವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿರ್ಗತಿಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಧನ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ದಂಪತಿಗಳು ಪಾಲ್ಗೊಂಡಿದ್ದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧೀಕಾರಿ ಮೋಹನ್, ಮೇಲ್ವಿಚಾರಕ ಡಿ.ರಮೇಶ್ ಹಾಜರಿದ್ದರು.