ಹೋಂಡಾ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಸಂಬಂದಿಸಿದಂತೆ ನಡೆದ ಘರ್ಷಣೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಚ್. ಕ್ರಾಸ್‌ನಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ನಗರದ ಎಸ್.ಎಲ್.ಎನ್. ಹೋಂಡಾ ಶೋ ರೂಂ ಮಾಲೀಕರ ಪುತ್ರ ಎಂ.ದಿನೇಶ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್‌್ಡ ನ ಮಾಲೀಕ ಬಿ.ವಿ.ಲಕ್ಷ್ಮಣ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಹಿನ್ನಲೆ: ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಎಸ್.ಎಲ್.ಎನ್ ಹೋಂಡಾ ಶೋ ರೂಂ ಹೋಂಡಾ ಕಂಪೆನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾಗಿದ್ದು, ತಾಲ್ಲೂಕಿನಾದ್ಯಂತ ಇವರ ಮುಖಾಂತರವೇ ವಾಹನ ಸರಬರಾಜು ಆಗುತ್ತಿತ್ತು. ಆದರೆ ಈಚೆಗೆ ಹೋಂಡಾ ದ್ವಿಚಕ್ರ ವಾಹನಗಳನ್ನು ಬೇರೆಡೆಯಿಂದ ತಂದು ತಾಲ್ಲೂಕಿನ ಹಲವು ಶೋರೂಂಗಳವರು ಮಾರುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಶುಕ್ರವಾರ ಬೆಳಗ್ಗೆ ಶೋ ರೂಂನ ಮಾಲೀಕರ ಪುತ್ರ ದಿನೇಶ್ ಎಚ್. ಕ್ರಾಸ್ ಕಡೆಗೆ ಹೋದಾಗ ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್ ಶೋ ರೂಂ ನಲ್ಲಿ ಹೋಂಡಾ ದ್ವಿಚಕ್ರ ವಾಹನಗಳಿದ್ದುದನ್ನು ಗಮನಿಸಿ ತನ್ನ ಮೊಬೈಲ್‌ನಿಂದ ಫೋಟೊ ತೆಗೆದಿದ್ದಾರೆ. ಇದನ್ನು ಕಂಡ ಎಚ್. ಕ್ರಾಸ್ ಶೋ ರೂಂ ನ ಮಾಲೀಕ ಲಕ್ಷ್ಮಣ್ ನಮ್ಮ ಶೋ ರೂಂ ಫೋಟೊ ತೆಗೆಯಲು ನೀನ್ಯಾರು ಎಂದು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಪರಸ್ಪರ ಘರ್ಷಣೆಯಾಗಿದೆ ಎನ್ನಲಾಗಿದೆ.
ಘರ್ಷಣೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿದ್ದು ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್ಸ್ ಶೋ ರೂಂಗೆ ಅಳವಡಿಸಿದ್ದ ಗಾಜೊಂದು ಪುಡಿಯಾದರೆ ಶಿಡ್ಲಘಟ್ಟದ ಎಸ್.ಎಲ್.ಎನ್ ಶೋರೂಂ ಮಾಲೀಕರ ಕಾರಿನ ಮುಂಭಾಗದ ಗಾಜು ಹೊಡೆದುಹೋಗಿದೆ.ಘಟನಾ ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ, ಶಿಡ್ಲಘಟ್ಟ ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್, ಗ್ರಾಮಾಂತರ ಪೋಲೀಸ್ ಠಾಣೆಯ ಪಿಎಸ್ಸೈ ಪ್ರದೀಪ್‌ಪೂಜಾರಿ ಭೇಟಿ ನೀಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.