Home News ವಿಜ್ಞಾನಿಗಳಾದ ಮೂತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು

ವಿಜ್ಞಾನಿಗಳಾದ ಮೂತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು

0

ವಿದ್ಯಾರ್ಥಿಯಲ್ಲಿರುವ ವಿಜ್ಞಾನಿಯನ್ನು ಗುರುತಿಸುವ ‘ಡಿಸೈನ್ ಫಾರ್ ಚೇಂಜ್’ ಎಂಬ ಸಂಸ್ಥೆ ನಡೆಸುವ ವೈಜ್ಞಾನಿಕ ಸಂಶೋಧನಾ ಸ್ಪರ್ಧೆಗೆ ತಾಲ್ಲೂಕಿನ ಮೂತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೂತ್ತೂರು ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿರುವ ಅಜಿತ್, ಶಶಿ ಮತ್ತು ಒಂಬತ್ತನೇ ತರಗತಿಯ ಮನೋಜ್ ರೂಪಿಸಿರುವ ಗುರುತ್ವಾಕರ್ಷಣೆ ಬಳಸಿ ಬೆಳೆಗೆ ನೀರು ಹನಿಸುವ ತಂತ್ರಜ್ಞಾನವು ಸ್ಪರ್ಧೆಗೆ ಆಯ್ಕೆಯಾಗಿದೆ. ಖಾಲಿಯಾದ ನೀರಿನ ಕ್ಯಾನ್, ಹನಿನೀರಿನ ಪೈಪನ್ನು ಅಳವಡಿಸಿ ಶಾಲಾ ಆವರಣದ ತರಕಾರಿ ಬೆಳೆಗಳಿಗೆ ಗುರುತ್ವಾಕರ್ಷಣೆ ಬಳಸಿ ನೀರು ಹನಿಸುವ ಕಡಿಮೆ ವೆಚ್ಚದ ಅವರ ವಿಧಾನವು ಬರಪೀಡಿತ ಜಿಲ್ಲೆಯ ಜನರಿಗೆ, ವಿದ್ಯುತ್ ಕಡಿತವಾಗುತ್ತಿರುವ ದಿನಗಳಲ್ಲಿ ಉಪಯುಕ್ತವಾಗಲಿದೆ. ಶಾಲೆಯ ಅನುಕೂಲಕ್ಕಾಗಿ ರೂಪಿಸಿದ ತಂತ್ರಜ್ಞಾನ ಈಗ ವೈಜ್ಞಾನಿಕ ಸಂಶೋಧನಾ ಸ್ಪರ್ಧೆವರೆಗೂ ಸಾಗಿದೆ.
ಈ ಸಂಶೋಧನೆಯಿಂದಾಗಿ ವಿದ್ಯಾರ್ಥಿಗಳಾದ ಅಜಿತ್, ಶಶಿ, ಮನೋಜ್ ತಮ್ಮ ವಿಜ್ಞಾನ ಶಿಕ್ಷಕರು ಮತ್ತು ಮುಖ್ಯಶಿಕ್ಷಕರೊಂದಿಗೆ ನವೆಂಬರ್ 22 ರಂದು ಅಹಮದಾಬಾದ್ನಲ್ಲಿ ನಡೆಯುವ ‘ಡಿಸೈನ್ ಫಾರ್ ಚೇಂಜ್’ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
‘ಡಿಸೈನ್ ಫಾರ್ ಚೇಂಜ್’ ಸಂಸ್ಥೆಯು ಜಾಗತಿಕ ಮಟ್ಟದ ಸಂಚಲನೆಯನ್ನು ರೂಪಿಸುತ್ತಿದೆ. ಅವರ ಉದ್ದೇಶ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳಕಿಗೆ ತರುವುದು ಮತ್ತು ಅದಕ್ಕೆ ಅವಕಾಶ ಕಲ್ಪಿಸಿ ಉತ್ತಮ ಜಾಗತಿಕ ಸಮಾಜ ರೂಪಿಸುವುದಾಗಿದೆ. ಸುಮಾರು 35 ದೇಶಗಳ ಮೂರು ಲಕ್ಷಕ್ಕೂ ಹೆಚ್ಚಿನ ಶಾಲೆಗಳ ಸಂಪರ್ಕದಲ್ಲಿರುವ ಈ ಸಂಸ್ಥೆ ಪ್ರತಿ ವರ್ಷ ವೈಜ್ಞಾನಿಕ ಸಂಶೋಧನಾ ಸ್ಪರ್ಧೆ ನಡೆಸುತ್ತದೆ. ಈ ಬಾರಿಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 2000 ಸ್ಪರ್ಧಿಗಳಲ್ಲಿ 100 ಉತ್ತಮವೆಂದು ಆಯ್ಕೆ ಮಾಡಿದ್ದು, ಅದರಲ್ಲಿ ಮುತ್ತೂರಿನ ವಿದ್ಯಾರ್ಥಿಗಳ ತಂತ್ರಜ್ಞಾನವು ಸ್ಥಾನ ಪಡೆದಿದೆ.
ಮುತ್ತೂರು ಪ್ರೌಢಶಾಲೆಯಲ್ಲಿ ‘ನಮ್ಮ ಮುತ್ತೂರು’ ಸಂಸ್ಥೆ, ಅಗಸ್ತ್ಯಾ ಮತ್ತು ಸೆಲ್ಕೋ ಫೌಂಡೇಷನ್ ಸಹಯೋಗದಲ್ಲಿ ವೈಜ್ಞಾನಿಕ ಪ್ರಯೋಗಾಲಯವನ್ನು ನಡೆಸಲಾಗುತ್ತಿದೆ. ಕಲಿಕೆಯೊಂದಿಗೆ ಪರಿಸರ, ಕೃಷಿ, ತಂತ್ರಜ್ಞಾನ, ತ್ಯಾಜ್ಯ ಮರುಪೂರಣ ಮುಂತಾದ ಹಲವು ವಿಭಾಗಗಳನ್ನಾಗಿಸಿ ವಿದ್ಯಾರ್ಥಿಗಳೇ ತಂಡಗಳಾಗಿ ಇದರಲ್ಲಿ ಭಾಗಿಯಾಗಿದ್ದಾರೆ.
‘ನಮ್ಮ ಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಲು ‘ನಮ್ಮ ಮುತ್ತೂರು’ ಸಂಸ್ಥೆ ಸಹಾಯ ಮಾಡಿದೆ. ನಮ್ಮ ವಿಜ್ಞಾನ ಶಿಕ್ಷಕ ಶ್ರೀನಿವಾಸ್ ಮತ್ತು ಅಗಸ್ತ್ಯಾ ಫೌಂಡೇಷನ್ ಲಕ್ಷ್ಯಕುಮಾರ್ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಶಾಲಾ ಆವರಣದಲ್ಲಿ ಕಡಿಮೆ ನೀರನ್ನು ಬಳಸಿ ಸಾವಯವ ತರಕಾರಿ ಬೆಳೆಯಲು ಈ ತಂತ್ರಜ್ಞಾನ ಬಳಸಿದೆವು. ಇದರಿಂದಾಗಿ ಗುಜರಾತ್ನ ಅಹಮದಾಬಾದ್ಗೆ ಹೋಗುತ್ತಿರುವುದು ತುಂಬಾ ಸಂತಸ ತಂದಿದೆ. ಅಲ್ಲಿಗೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳನ್ನೂ ಕಂಡು ಮಾಹಿತಿ ಪಡೆದು ಬರುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಅಜಿತ್, ಶಶಿ ಮತ್ತು ಮನೋಜ್.
– ಡಿ.ಜಿ.ಮಲ್ಲಿಕಾರ್ಜುನ.
 
[images cols=”three” lightbox=”true”]
[image link=”2180″ image=”2180″]
[image link=”2179″ image=”2179″]
[image link=”2178″ image=”2178″]
[/images]