Home News ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಪ್ರೇರಕರಾಗಲಿ

ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಪ್ರೇರಕರಾಗಲಿ

0

‘ವಿಜ್ಞಾನವೇ ನನ್ನ ಮತ’ ಎಂದು ನಂಬಿ ಸಾಧನೆ ಮಾಡಿದ ಡಾ.ಸರ್.ಸಿ.ವಿ. ರಾಮನ್ ಪ್ರೇರಣೆಯಾಗಲಿ. ಅವರಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ವಿಜ್ಞಾನ ರಂಗದತ್ತ ಆಕರ್ಷಿತರಾಗುವಂತಾಗಲಿ ಎಂದು ತಾಲ್ಲೂಕು ಕ ಸಾ ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ನಗರದ ದ ಕ್ರೆಸೆಂಟ್ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಮುನ್ನೂರು ರೂಗಳಿಗೂ ಕಡಿಮೆ ಬೆಲೆ ಬಾಳುವ ಉಪಕರಣಗಳನ್ನು ಉಪಯೋಗಿಸಿ ಬೆಳಕಿನ ಚದುರಿಕೆ ಮತ್ತು ಧ್ವನಿ ಕುರಿತು ಸರ್.ಸಿ.ವಿ. ರಾಮನ್ ಕೆಲವೊಂದು ಮೂಲಭೂತ ಸಂಶೋಧನೆ ನಡೆಸಿ ಪಾಶ್ಚಿಮಾತ್ಯರನ್ನು ಬೆರಗುಗೊಳಿಸಿದ್ದರು. ತಮ್ಮ ಸಾಧನೆ, ಬುದ್ಧಿಶಕ್ತಿ ಮತ್ತು ಪರಿಶ್ರಮಗಳಿಂದ ನೋಬೆಲ್ ಪಾರಿತೋಷಕ ಪಡೆದ ಭಾರತದ ಏಕೈಕ ವಿಜ್ಞಾನಿ ಅವರು. ಭಾರತರತ್ನ ಸೇರಿದಂತೆ ಒಂಭತ್ತು ದೇಶದ ಗೌರವ ಡಾಕಟರೇಟ್ ಪಡೆದಿದ್ದ ಅವರು ನಮ್ಮ ದೇಶದಲ್ಲಿ ವಿಜ್ಞಾನಿಗಳ ಪರಂಪರೆ ಮುಂದುವರಿಯಬೇಕೆಂಬ ಮಹದಾಸೆಯಿಂದ ಬೆಂಗಳೂರಿನ ಹೆಬ್ಬಾಳದ ಬಳಿ ರಾಮನ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜ್ಞಾನಿಗಳ ಮೇರಿಕ್ಯೂರಿ, ಮೈಕೆಲ್ ಫ್ಯಾರಡೆ ಜೀವನದ ಘಟನೆಗಳನ್ನು ವಿವರಿಸಿ ವಿದ್ಯಾರ್ಥಿಗಳು ಇಂಥಹವರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಪ್ರೇರಣೆ ಹೊಂದಬೇಕು ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಹತ್ತನೇ ತರಗತಿಯ ಯಶಸ್ವಿನಿ, ಅರುಣ್ ಕೊಠಾರಿ ಮತ್ತು ಮೋನಿಕಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ದ.ರಾ.ಬೇಂದ್ರೆ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ದ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ, ಶಿಕ್ಷಕರಾದ ಎನ್. ನರಸಿಂಹಮೂರ್ತಿ, ಕೆ.ಎನ್. ರಾಮಚಂದ್ರ, ಡಿ.ವಿ. ಭಾಸ್ಕರ್, ಕ.ಸಾ.ಪ ಸದಸ್ಯ ಗುರುನಂಜಪ್ಪ ಹಾಜರಿದ್ದರು.