Home News ವಿಜ್ಞಾನ ಮಾತ್ರ ವಿಭಿನ್ನವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ

ವಿಜ್ಞಾನ ಮಾತ್ರ ವಿಭಿನ್ನವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ

0

ಚಿಕಿತ್ಸಕ ನೋಟ ಮತ್ತು ಕನಸುಗಳನ್ನು ಕಾಣುವ ಪ್ರವೃತ್ತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಗಣಿತ ಮತ್ತು ವಿಜ್ಞಾನ ಮಾತ್ರ ವಿಭಿನ್ನವಾಗಿ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಇಸ್ರೋ ಜಿಯೋಸ್ಯಾಟ್‌ ಯೋಜನೆಯ ವಿಜ್ಞಾನಿ ಎಸ್‌.ಹಿರಿಯಣ್ಣ ತಿಳಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ರೋ ಸಂಸ್ಥೆ ಬೃಹದಾಕಾರವಾಗಿ ಬೆಳೆಯುತ್ತಿದೆ. ವರ್ಷಕ್ಕೆ 12 ಉಪಗ್ರಹಗಳನ್ನು ಉಡಾಯಿಸಲಾಗುತ್ತಿದೆ. ಯುವ ವಿಜ್ಞಾನಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.
ವಿಜ್ಞಾನ ಮಿದುಳಿಗೆ ಮೇವಿದ್ದಂತೆ, ಅದನ್ನು ಆನಂದಿಸುತ್ತಾ ಕಲಿಯಬೇಕು. ನಮ್ಮ ಸುತ್ತಮುತ್ತಲಿನ ಸಕಲ ಕ್ರಿಯೆಗಳಲ್ಲೂ ವಿಜ್ಞಾನ ಮತ್ತು ಗಣಿತವಿದೆ. ಶಾಲಾ ಪಠ್ಯದೊಂದಿಗೆ ಸಾಕಷ್ಟು ಪುಸ್ತಕಗಳನ್ನು ಓದಬೇಕು. 30 ವರ್ಷಗಳ ಅನುಭವದಿಂದ ಬರೆದ ಪುಸ್ತಕವನ್ನು 3 ಗಂಟೆ ಓದುವ ಮೂಲಕ ಆ ಜ್ಞಾನ ಸಂಪಾದಿಸಬಹುದಾಗಿದೆ. ಒಳ್ಳೆಯ ಪುಸ್ತಕಗಳನ್ನು ಓದಲು ಜೀವಮಾನ ಸಾಲದು. ಓದುವ ಚಟವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಶಿಸ್ತು, ಸಾಧನೆ ಮತ್ತು ಏಕಾಗ್ರತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಒಂದು ಜನಾಂಗಕ್ಕೆ ಸೀಮಿತವಾಗದಂತೆ ನಮ್ಮ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಾತಿ ಬೇಧವಿಲ್ಲದೇ ಗುರುತಿಸಿ ಪುರಸ್ಕರಿಸುತ್ತಿರುವ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿಭೆಯು ಜಾತಿ, ಧರ್ಮ, ಭಾಷೆ, ಗಡಿಯನ್ನು ಮೀರಿದಂಥದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಸ್‌.ಎಸ್‌.ಎಲ್‌.ಸಿ, ಪಿಯುಸಿ, ಪದವಿಗಳಲ್ಲಿ ಹೆಚ್ಚು ಅಂಕ ಗಳಿಸಿರುವ 20 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರತಿ ವಿದ್ಯಾರ್ಥಿಗೂ ಒಂದು ಸಾವಿರ ರೂ ನಗದು, ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು.
ತಾಲ್ಲೂಕಿನ ಸಾಧಕರಾದ ಚೀಮಂಗಲ ಮೂಲದ ಕವಿ ಬಿ.ಆರ್‌.ಲಕ್ಷ್ಮಣರಾವ್‌, ನವೋದಯ ವಿದ್ಯಾಸಂಸ್ಥೆಯ ಎನ್‌.ಆರ್‌.ಕೃಷ್ಣಮೂರ್ತಿ, ಡಾ.ಎನ್‌.ಎನ್‌.ರಾಘವೇಂದ್ರರಾವ್‌, ಡಾ.ಬ್ರಹ್ಮಶ್ರೀ ಉಮೇಶ್‌ ಶರ್ಮಗುರೂಜಿ, ಸಂಗೀತ ನಿರ್ದೇಶಕ ಪ್ರಣವ್‌ ಸತೀಶ್‌ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುನ್ನ ರುದ್ರ ಕ್ರಮಾರ್ಚನಾ ಪೂರ್ವಕ ಬಿಲ್ವಯಾಗ ಮಹೋತ್ಸವವನ್ನು ನಡೆಸಲಾಯಿತು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್‌, ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಜಿಲ್ಲಾ ಪಂಚಾಯತಿ ಸದಸ್ಯ ಎಚ್‌.ವಿ.ಮಂಜುನಾಥ್‌, ಬಿ.ಜೆ.ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ನಾಗಭೂಷಣರಾವ್‌, ಎನ್‌.ಕೆ.ಗುರುರಾಜರಾವ್‌, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್‌, ತಾಲ್ಲೂಕು ಅಧ್ಯಕ್ಷ ಎ.ಎಸ್‌.ರವಿ, ವಿ.ಕೃಷ್ಣ, ಎಸ್‌.ಶ್ರೀಕಾಂತ್‌, ಶೇಷಭಟ್‌, ರಮೇಶ್‌ರಾವ್‌, ಎಸ್‌.ಸತೀಶ್‌, ಎಚ್‌.ವಿ.ನಾಗೇಂದ್ರ, ಯು.ಆರ್‌.ಮಾಧವರಾವ್‌, ಪಿ.ಶ್ರೀಕಾಂತ್‌, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.