Home News ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು

ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು

0

ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ತಿಳಿಸಿದರು.
ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಪದ ಸಂಪತ್ತು’ ಉಪನ್ಯಾಸ ಕಮ್ಮಟದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕೇವಲ ಭಾಷೆಯನ್ನಾಗಿ ಪರಿಗಣಿಸದೆ, ಅದೊಂದು ರೀತಿ, ನೀತಿ, ಖ್ಯಾತಿ, ಗತಿ, ಮತಿ ಮತ್ತು ಪದ್ಧತಿಯನ್ನು ತಿಳಿಸುವ, ಸತ್ಯಗಳನ್ನು ಸಾಕ್ಷಾತ್ಕಾರ ಮಾಡಿಸುವ ಕ್ರಿಯೆಯಾಗಿ, ಸಂಸ್ಕೃತಿಯಾಗಿ, ಅಕ್ಷರ ಅಕ್ಷಯವಾಗಿಸುವ ಶಿಕ್ಷಣವನ್ನು ಲಕ್ಷಣವಾಗಿಸುವಲ್ಲಿ ಅಕ್ಷರದೊಂದಿಗೆ ಆಡುತ್ತಾ ಕಲಿಯಬೇಕು ಎಂದು ಹೇಳಿದರು.
‘ಜನವರಿ’ ಕೇವಲ ವರ್ಷಾರಂಭವಾಗಿರದೆ ಅದೊಂದು ಮಹತ್ತರ ಸಂದೇಶ ಸಾರುವ, ಸರ್ವಧರ್ಮಗಳನ್ನು ಸಾಂಕೇತಿಸುವ, ಸತ್ಯಗಳ ದರ್ಶನ ಮಾಡಿಸುವ ಪದವಾಗಿದೆ ಎಂದು ಹೇಳಿ ಜನವರಿ ಎಂಬ ಪದದ ನೂರೈವತ್ತಕ್ಕೂ ಮೀರಿ ಅರ್ಥಗಳನ್ನು ವ್ಯಾಖ್ಯಾನಿಸಿದರು.
ವಕೀಲ ರವೀಂದ್ರನಾಥ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಭಾಷೆಯ ಬೆಳವಣಿಗೆಯಾಗಬೇಕು, ಓದುವ ಆಸಕ್ತಿ ಹೆಚ್ಚಬೇಕು, ಸ್ಪಷ್ಟ ಉಚ್ಛಾರಣೆ ಕಲಿಯಬೇಕು. ವಿದ್ಯಾರ್ಥಿಗಳು ವ್ಯರ್ಥವಾಗಿ ಸಮಯವನ್ನು ಕಳೆಯುವ ಬದಲಿಗೆ ಅರ್ಥವತ್ತಾದ, ಸೃಜನಾತ್ಮಕ, ಗುಣಾತ್ಮಕ, ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಸರಳ ಕನ್ನಡ ಪದಗಳಲ್ಲಿನ ಅಕ್ಷರದರ್ಥ ಶ್ರೀಮಂತಿಕೆಯನ್ನು ಗುರುತಿಸುವುದನ್ನು ಕಲಿಯಬೇಕು. ವಿವೇಕಾನಂದರ ಚಿಂತನೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಿ ವಿವೇಕವಂತರಾಗಬೇಕು’ ಎಂದು ಹೇಳಿದರು.
ಪ್ರಾಂಶುಪಾಲ ಆನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.