Home News ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ

ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ

0

ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ. ಆದರೆ ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಸಮಾಜದ ಎಲ್ಲಾ ವರ್ಗದ ಮಕ್ಕಳೂ ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಕಲಿಯುವ ವಿದ್ಯಾಮಂದಿರ ನಿರ್ಮಾಣವಾಗಲಿ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ನಗರದ ಎಸ್.ವಿ.ಗಣೇಶ್ನಗರದಲ್ಲಿ ಭಾನುವಾರ ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ವತಿಯಿಂದ ಪ್ರಾರಂಭಿಸಲಾಗುತ್ತಿರುವ ವಿದ್ಯಾ ಸಂಸ್ಥೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರನನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲಿಯನ್ನಾಗಿಯೂ, ಓರ್ವ ಉತ್ತಮ ಪ್ರಜೆಯನ್ನಾಗಿಯೂ, ಸ್ವಾವಲಂಬೀ ಬದುಕನ್ನು ನಿರ್ವಹಿಸಬಲ್ಲ ನಾಗರಿಕನನ್ನಾಗಿಯೂ ರೂಪಿಸುವ ಧ್ಯೇಯವನ್ನು ಇಟ್ಟುಕೊಂಡು ವಿದ್ಯಾಸಂಸ್ಥೆಯನ್ನು ನಡೆಸಬೇಕು. ಸರಿಯಾದ ಜೀವನ ಮೌಲ್ಯಾಧಾರಿತ ಶಿಕ್ಷಣ ಸಿಗುವಂತಾಗಲಿ ಎಂದು ಹಾರೈಸಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಆಧುನಿಕ ಯುಗವು ತಾಂತ್ರಿಕವಾಗಿ ದಾಪುಗಾಲು ಇಡುತ್ತಾ ಸಾಗುತ್ತಿದೆ. ಅದರ ವೇಗಕ್ಕೆ ಎಲ್ಲರೂ ಹೊಂದಿಕೊಳ್ಳಬೇಕಾಗಿದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಬಾಲ್ಯದಲ್ಲಿಯೇ ಮಕ್ಕಳು ಯಾವ ಕ್ಷೇತ್ರದಲ್ಲಿ ಕುಶಲಿಯಾಗ ಬಹುದು ಎಂಬುದನ್ನು ಕಂಡು ಹಿಡಿದು ಅದರಲ್ಲಿ ಅವನು ದಕ್ಷನಾಗುವಂತೆ, ಕೌಶಲವನ್ನು ಅಭ್ಯಾಸ ಮಾಡುವಂತೆ ಪ್ರೇರಣೆ ನೀಡಬೇಕು. ನಿಗದಿತ ಶಿಕ್ಷಣವನ್ನು ಕೊಡುವುದರ ಜೊತೆಗೆ ಉತ್ತಮ ಗುಣ, ನಡತೆ, ತ್ಯಾಗ ಮನೋಭಾವನೆ, ಸೇವಾ ಭಾವನೆ, ದ್ವೇಷವಿಲ್ಲದ ಸಹಜ ಪ್ರೀತಿಯ ವರ್ತನೆ ಮೊದಲಾದ ಜೀವನ ಮೌಲ್ಯಗಳನ್ನು ಮಕ್ಕಳು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಪ್ರೇರೇಪಿಸ ಬೇಕು. ಶಿಕ್ಷಣದ ಜೊತೆಗೆ ಬದುಕುವುದನ್ನು ಮೊದಲು ಅಭ್ಯಾಸ ಮಾಡುವಂತೆ ಪರೋಕ್ಷವಾಗಿ ಪ್ರಶಿಕ್ಷಣ ನೀಡಬೇಕು ಎಂದು ನುಡಿದರು.
ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವೆಂಕಟರೋಣಪ್ಪ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಡಾ.ಲಕ್ಷ್ಮೀನಾರಾಯಣ್, ನಗರಸಭೆ ಸದಸ್ಯ ಜಬೀವುಲ್ಲ, ಸುಬ್ರಮಣಿ, ಕ್ರೆಸೆಂಟ್ ತಮೀಮ್ ಅನ್ಸಾರಿ, ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್(ದೇವಿ), ನಾಗನರಸಿಂಹ, ಮುನಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!