ತೆಲುಗನ್ನಡ ಪ್ರದೇಶವಾದ ನಮ್ಮಲ್ಲಿ ಸಾಹಿತ್ಯದ ಕೊಡುಕೊಳ್ಳುವಿಕೆಯ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ನಡೆಯಬೇಕಿದೆ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ಕುರುಬರಪೇಟೆಯ ಭುವನಗಿರಿ ಭುವನೇಶ್ವರಿ ವೇದಿಕೆಯಲ್ಲಿ ನಡೆದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಅವರು ಮಾತನಾಡಿದರು.
ಕನ್ನಡ ಭಾಷೆಯು ಬೆಳೆಯಲು ಭಾಷಾ ಸಾಮರಸ್ಯವೂ ಒಂದು ಕಾರಣವಾಗುತ್ತದೆ. ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ವಿಶಿಷ್ಠ ತೆಲುಗನ್ನಡ ಶಬ್ಧಗಳು ಕನ್ನಡದ ಆಸ್ತಿಯಾಗಿವೆ. ತೆಲುಗಿನ ಸಾಹಿತ್ಯವನ್ನು ಕನ್ನಡಕ್ಕೆ ಕನ್ನಡದ ಸಾಹಿತ್ಯವನ್ನು ತೆಲುಗಿಗೆ ಪರಿಚಯಿಸುವುದರೊಂದಿಗೆ ನಮ್ಮ ಜಿಲ್ಲೆಯಲ್ಲಿನ ವಿಶಿಷ್ಠ ಪದಗಳ ಪ್ರಯೋಗವೂ ಸಾಹಿತ್ಯದ ಮೂಲಕ ಇತರರಿಗೆ ಪರಿಚಿತವಾಗಬೇಕಿದೆ. ರೇಷ್ಮೆ ಮತ್ತು ನೀರಿಗಾಗಿ ನಡೆಸುವ ಹೋರಾಟಗಳು ತೆಲುಗಿನ ವಿಪ್ಲವ ಸಾಹಿತ್ಯದ ಮಾದರಿಯಲ್ಲಿ ಕನ್ನಡದಲ್ಲಿ ಹೊರಹೊಮ್ಮಬೇಕು. ಸಾಹಿತ್ಯವು ಮಣ್ಣಿನ ನೋವು, ನಲಿವನ್ನು ಪ್ರತಿನಿಧಿಸುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಡಿಯೋ ದೂರದರ್ಶಕ ಕೇಂದ್ರದ ವಿಜ್ಞಾನಿ ಜಿ.ಎನ್.ರಾಜಶೇಖರ, ಹಿರಿಯ ಕನ್ನಡ ಪರ ಹೋರಾಟಗಾರ ಖ.ರಾ.ಖಂಡೇರಾವ್, ಸಾವಯವ ಕೃಷಿಕ ಸೋಮೇನಹಳ್ಳಿ ವೆಂಕಟೇಶಪ್ಪ ಮತ್ತು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಅವರನ್ನು ಸನ್ಮಾನಿಸಲಾಯಿತು.
ಸಮಾನ ಮನಸ್ಕರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎನ್.ಈ.ಜಗದೀಶ್ಬಾಬು, ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ತಾದೂರು ಮಂಜುನಾಥ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಎಸ್.ವಿ.ನಾಗರಾಜರಾವ್, ಶ್ರೀನಿವಾಸ್, ಅಕ್ರಂಪಾಷ, ಪುರುಷೋತ್ತಮ್, ಶ್ರೀಧರ್, ಮುನಿರಾಜು, ಹರ್ಷದ್, ಅಫ್ಜಲ್, ತ್ಯಾಗರಾಜ್, ಮುರಳಿ, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.