Home News ವಿಮಾನದಲ್ಲಿ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವ ರೈತಮಹಿಳೆಯರು

ವಿಮಾನದಲ್ಲಿ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವ ರೈತಮಹಿಳೆಯರು

0

ಹೈದರಾಬಾದಿನ ಬಳಿಯಿರುವ ಆಂಧ್ರಪ್ರದೇಶ ಅಂತಾರಾಷ್ಟ್ರೀಯ ಬೆಳೆ ಅಧ್ಯಯನ ಸಂಸ್ಥೆಯ ಕೃಷಿ ತಂತ್ರಜ್ಞಾನ ಮತ್ತು ವಿಸ್ತರಣಾ ಕೇಂದ್ರದಲ್ಲಿ ತಾಲ್ಲೂಕಿನ ಮಹಿಳಾ ರೈತಕೂಟದ ರೈತಮಹಿಳೆಯರಿಗೆ ಅಧ್ಯಯನಕ್ಕಾಗಿ ಅನುಮತಿ ದೊರೆತಿದೆ ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಭಾರತಾಂಬೆ ರೈತಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನೀರಿಲ್ಲದ ಈ ಸಂದರ್ಭದಲ್ಲಿ ಒಣ ಬೇಸಾಯದಲ್ಲಿ ನೀರಿನ ಸದ್ಭಳಕೆ ಹಾಗೂ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವ ಸಲುವಾಗಿ ತೆಲಂಗಾಣ ರಾಜ್ಯಕ್ಕೆ ತೆರಳಲು 38 ಮಂದಿ ರೈತ ಮಹಿಳೆಯರು ಹಾಗೂ 12 ಮಂದಿ ಪ್ರಗತಿಪರ ರೈತರಿಗೆ ಅಧ್ಯಯನಕ್ಕಾಗಿ ಅನುಮತಿ ದೊರೆತಿದೆ ಎಂದು ಹೇಳಿದರು.
ವಿಶೇಷವೆಂದರೆ ಎಂದೂ ವಿಮಾನ ಮತ್ತು ರೈಲಿನಲ್ಲಿ ಪ್ರಯಾಣ ಮಾಡದ 38 ಮಂದಿ ರೈತ ಮಹಿಳೆಯರು ಜುಲೈ 27 ರಂದು ವಿಮಾನದಲ್ಲಿ ಹೈದರಾಬಾದಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಧ್ಯಯನ ಪ್ರವಾಸವನ್ನು ಮುಗಿಸಿಕೊಂಡು ಜುಲೈ 30ರಂದು ರೈಲಿನಲ್ಲಿ ವಾಪಸಾಗಲಿದ್ದಾರೆ ಎಂದು ತಿಳಿಸಿದರು.
ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಲಲಿತಮ್ಮ, ನಳಿನ, ಸುಜಾತ, ಸಂಪಂಗಮ್ಮ, ಸರೋಜಮ್ಮ, ಶ್ಯಾಮಲಾ, ನಿರ್ಮಲಮ್ಮ, ಅಮೃತ, ರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.