Home News ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ ರೈತರು

ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ ರೈತರು

0

ತಾಲ್ಲೂಕಿನಾಧ್ಯಂತ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಫಾರಂ ನಂ 57 ರಲ್ಲಿ ಅರ್ಜಿ ಹಾಕಲು ಅವಕಾಶ ಕೊಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು ಸೇರಿದಂತೆ ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ದುರಸ್ತಿ ಆಗದೆ ಇರುವ ಭೂಮಿಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಹಶೀಲ್ದಾರ್ ಕೆ.ಅರುಂದತಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್‌ರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಕೆ.ಅರುಂದತಿ ಅವರನ್ನು ಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿದ ರೈತ ಮುಖಂಡರು ತಾಲ್ಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ರೈತರ ಫಹಣಿಯಲ್ಲಿ ಬೆಳೆ ನಮೂದು ಆಗದ ಕಾರಣ ರೈತರ ಖಾತೆಗೆ ಈವರೆಗೂ ಬೆಳೆ ವಿಮೆ ಬಂದಿಲ್ಲ. ಎಚ್.ಎನ್ ವ್ಯಾಲಿ ನೀರು ಜಿಲ್ಲಾ ಕೇಂದ್ರದವರೆಗೂ ಬಂದಿದ್ದು ತಾಲ್ಲೂಕಿನ ಕೆರೆಗಳಿಗೆ ಬಂದಿಲ್ಲ. ಕಾರಣ ತಾಲ್ಲೂಕಿನ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ತೆರವು ಕಾರ್ಯಚರಣೆ ಹಾಗೂ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆರವು ಗೊಳಿಸುವ ಕೆಲಸ ಸಂಪೂರ್ಣವಾಗಿಲ್ಲ. ನಗರಕ್ಕೆ ಹೊಂದಿಕೊಂಡಿರುವ ಗೌಡನಕೆರೆ ಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ಈವರೆಗೂ ತೆರವುಗೊಳಿಸಿಲ್ಲ. ಕೂಡಲೇ ತಾಲ್ಲೂಕಿನ ಕೆರೆಗಳ ವೀಕ್ಷಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಜಿಲ್ಲೆಯಾದ್ಯಂತ ನೀಲಗಿರಿ ತೆಗೆಯಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿ ತಿಂಗಳಾದರೂ ತಾಲ್ಲೂಕಿನಲಿ ನೀಲಗಿರಿ ತೆರವು ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರೈತರಿಗೆ ಕೆಲವು ಬೆಳೆಗಳಿಗೆ ನೀಲಗಿರಿ ಕಡ್ಡಿಗಳ ಅಗತ್ಯತೆ ಇದ್ದು ನೆರೆಯ ಆಂದ್ರಪ್ರದೇಶದ ಸರ್ಕಾರ ಮಾದರಿ ಕಲ್ಲು ಕೂಚ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ನೀಡುವ ಕೆಲಸವಾಗಬೇಕು ಎಂದರು.
ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ, ರೈತಭವನ ನಿರ್ಮಾಣ ಮಾಡುವುದು, ತಾಲ್ಲೂಕಿನಾದ್ಯಂತ ಗುಂಡುತೋಪುಗಳು ಮಾಯವಾಗಿದ್ದು ಹಸಿರು ಕ್ರಾಂತಿ ಯೋಜನೆಯಡಿ ಸಸಿ ನೆಡುವ ಕಾರ್ಯವಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಅರುಂದತಿ ಮಾತನಾಡಿ, ರೈತರು ನೀಡಿರುವ ಮನವಿಯ ಮೇರೆಗೆ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶ್ರೀಧರ್, ಕೋಟೆ ಚನ್ನೇಗೌಡ, ಎಂ.ವಿ.ವೆಂಕಟರೆಡ್ಡಿ, ಮುದ್ದು ಕೃಷ್ಣ, ವೆಂಕಟೇಶ್, ಶಂಕರನಾರಾಯಣ, ರವಿಕುಮಾರ್, ಸತೀಶ್ ಹಾಜರಿದ್ದರು.

error: Content is protected !!