Home News ವಿಶ್ವ ಕಾರ್ಮಿಕರ ದಿನಾಚರಣೆ

ವಿಶ್ವ ಕಾರ್ಮಿಕರ ದಿನಾಚರಣೆ

0

ಕೇಂದ್ರ ಹಾಗು ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಮುಂಬರುವ ದಿನಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಗಂಡಾಂತರ ಕಾದಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಿಐಟಿಯು ತಾಲೂಕು ಘಟಕದಿಂದ ಏರ್ಪಡಿಸಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರದ ನವ ಉದಾರೀಕರಣ ನೀತಿಯಿಂದ 1948 ರಲ್ಲಿ ಕಾರ್ಮಿಕರಿಗಾಗಿ ರಚಿಸಲಾಗಿದ್ದ 44 ಕಾನೂನುಗಳ ಸಡಿಲಗೊಳಿಸಿ ಕಾರ್ಮಿಕರ ಹಕ್ಕುಗಳನ್ನು ಇಲ್ಲದಾಗಿಸಲು ನಿರಂತರ ಯತ್ನ ನಡೆಯುತ್ತಿದೆ. ಇದರಿಂದ ಖಾಯಂ ಕೆಲಸ, ಕೆಲಸದ ಅವಧಿ, ಸಂಘ ಕಟ್ಟಿಕೊಳ್ಳುವ ಹಕ್ಕು, ಮುಷ್ಕರದ ಹಕ್ಕು ಹಾಗು ಕೆಲಸಕ್ಕೆ ತಕ್ಕ ವೇತನ ದಂತಹ ಹಕ್ಕುಗಳನ್ನು ಬಹಳಷ್ಟು ಕಾರ್ಮಿಕರು ಕಳೆದುಕೊಳ್ಳಲಿದ್ದಾರೆ ಎಂದರು.

ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭದ ಅಂಗವಾಗಿ ಸಿಐಟಿಯು ತಾಲೂಕು ಘಟಕದಿಂದ ನಗರದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣದವರೆಗೂ ಮೆರವಣಿಗೆ ಏರ್ಪಡಿಸಲಾಗಿತ್ತು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಬಜೆಟ್ ನಲ್ಲಿ ಹಣ ಕಡಿತಗೊಳಿಸಿರುವುದರಿಂದ ಯೋಜನೆ ಮರೀಚಿಕೆಯಾಗಲಿದೆ. ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಂಗನವಾಡಿ, ಪಂಚಾಯಿತಿ, ಕಟ್ಟಡ, ಬಿಸಿಯೂಟ, ಆಶಾ, ಹಮಾಲಿ, ಪೌರ ಕಾರ್ಮಿಕ, ಆಟೋ, ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಜನತೆಯ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಈವರೆಗೂ ರಾಜ್ಯ ಸರಕಾರ ಜಾರಿ ಮಾಡದೇ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ ಎಂದರು. ಹಾಗಾಗಿ ಕಾರ್ಮಿಕ ವರ್ಗವೆಲ್ಲಾ ಒಗ್ಗಟ್ಟಾಗಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದ್ದು ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಡಿವೈಎಫ್‍ಐ ಅಧ್ಯಕ್ಷ ಫಯಾಜುಲ್ಲಾ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರಕಾರ ಕಾರ್ಪೊರೇಟ್ ಹಾಗು ಬಂಡವಾಳ ಶಾಹಿಗಳ ಪರ ಕಾನೂನುಗಳನ್ನು ರೂಪಿಸುವ ಮೂಲಕ ಬ್ರಿಟೀಷ್ ಆಳ್ವಿಕೆಯಲ್ಲಿದ್ದ ಕಾರ್ಮಿಕ ಕಾನೂನುಗಳಂತೆ ರೂಪಿಸುತ್ತಿದ್ದು ಇದರಿಂದ ದೇಶದ ಸಂಘಟಿತ ಹಾಗು ಅಸಂಘಟಿತ ಕಾರ್ಮಿಕರಿಗೆ ಗಂಡಾಂತರ ಕಾದಿದೆ ಎಂದರು.
ನಗರದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣದವರೆಗೂ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿದರು.
ಸಿಐಟಿಯು ಮುಖಂಡರಾದ ಪಾಪಣ್ಣ, ಶಂಕರಪ್ಪ, ಬಿಸಿಯೂಟ ನೌಕರರ ಸಂಘದ ಮಂಜುಳಮ್ಮ, ಪೂಜ, ನಂಜಮ್ಮ, ಗೀತ, ಹಮಾಲಿ ಸಂಘದ ಅಧ್ಯಕ್ಷ ಬಾಬಾಜಾನ್, ಜನವಾದಿ ಸಂಘಟನೆಯ ಮಧುಲತಾ, ಸರಸ್ವತಮ್ಮ ಮತ್ತಿತರರು ಹಾಜರಿದ್ದರು.

error: Content is protected !!