Home News ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಜಾಥಾ

ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಜಾಥಾ

0

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ “ನಮ್ಮ ನಡೆ ಕ್ಷಯ ಮುಕ್ತ ಭಾರತದ ಕಡೆಗೆ” ಎಂಬ ಘೋಷವಾಕ್ಯದೊಂದಿಗೆ ಹೊರಟ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಕ್ಷಯರೋಗ ಒಂದು ಮಾರಾಣಾಂತಿಕ ಕಾಯಿಲೆಯಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗದ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ಕ್ಷಯರೋಗ ಬಂದಿದೆ ಎನ್ನುವ ಕೀಳರಿಮೆಯನ್ನು ಬಿಟ್ಟು, ರೋಗವನ್ನು ನಿಯಂತ್ರಣ ಮಾಡಿಕೊಳ್ಳುವುದರ ಜೊತೆಗೆ, ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡಲು ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವೈದ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಾಗ ಮುಜುಗರ ಪಡದೆ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದರು.
ಕ್ಷಯರೋಗಕ್ಕೆ ಎಲ್ಲಾ ಡಾಟ್‌ಕೆಂದ್ರಗಳಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ. ಕ್ಷಯರೋಗ ಪತ್ತೆಗೆ ಹೊಸ ಹೊಸ ಸಲಕರಣೆಗಳು ಲಭ್ಯವಿದ್ದು ಅವುಗಳ ಉಪಯೋಗ ಮಾಡುವದರ ಮೂಲಕ ಆದಷ್ಟು ಬೇಗನೆ ಕ್ಷಯರೋಗ ಪತ್ತೆ ಹಚ್ಚಬಹುದು ಎಂದು ಹೇಳಿದರು.
ಹಿರಿಯ ಆರೋಗ್ಯ ಚಿಕಿತ್ಸಾ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ಕ್ಷಯರೋಗಕ್ಕೆ ನಿಯಮ ಚಿಕಿತ್ಸೆ, ಆಹಾರ ಹಾಗೂ ಸ್ವಚ್ಛತೆಯು ಬಹಳ ಮುಖ್ಯ. ನಿಯಮಿತ ಹಾಗೂ ನಿರಂತರವಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಕ್ಷಯರೋಗದಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ. ಕ್ಷಯರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದಾದರೂ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಕ್ಷಯರೋಗ(ಟಿಬಿ) ಎಂದರೆ ಹಿಂದೆ ಭಯಪಡುವ ವಾತಾವರಣವಿತ್ತು. ಆದರೆ ಇಂದು ವೈದ್ಯಕೀಯ ಜಗತ್ತಿನಲ್ಲಿ ಆಗಿರುವ ಮಹತ್ತರ ಬದಲಾವಣೆಯಿಂದಾಗಿ ಗುಣಪಡಿಸುವ ಸಾಮರ್ಥ್ಯ ಮತ್ತು ಔಷಧಿ ಇದೆ ಎಂದರು.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಿದರು.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯ ಮೇಲ್ವಿಚಾರಕಿ ಮುನಿರತ್ನಮ್ಮ, ಲೋಕೇಶ್, ಚಾಂದ್‌ಪಾಷ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

error: Content is protected !!