Home News ವಿಶ್ವ ಪರಿಸರ ದಿನಾಚರಣೆ ಮತ್ತು ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ

ವಿಶ್ವ ಪರಿಸರ ದಿನಾಚರಣೆ ಮತ್ತು ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ

0

ರೈತ ಆಸಕ್ತ ಗುಂಪುಗಳು ಗ್ರಾಮಗಳಲ್ಲಿ ಮಾಡುತ್ತಿರುವುದು ಸಂತೋಷದಾಯಕ ಸಂಗತಿ. ತಮ್ಮ ಅಭಿವೃದ್ಧಿಗಾಗಿ ತಾವುಗಳೇ ಒಗ್ಗೂಡುವ ಈ ಯೋಜನೆಯಲ್ಲಿ ರೈತರು ಸಾಂಘಿಕವಾಗಿ ಅಭಿವೃದ್ಧಿಯತ್ತ ದಾಪುಗಾಲಿಡಬೇಕು ಎಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೈರಾಡ ಕಾರ್ಯಕ್ರಮದ ಅಧಿಕಾರಿ ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಲಗಿನಾಯಕನಹಳ್ಳಿಯಲ್ಲಿ ಸೋಮವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಿದ ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರದೋ ನೆರವು ನಮ್ಮೆಡೆಗೆ ಬರುತ್ತದೆ ಎಂದು ಕಾಯುವುದರ ಬದಲು ನಮ್ಮ ಶಕ್ತಿ, ಸಾಮರ್ಥ್ಯ, ನಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆಯನ್ನು ಕಂಡುಕೊಂಡು ಅಭಿವೃದ್ಧಿಯತ್ತ ಮುನ್ನಡೆಯೋಣ. ಈ ನಿಟ್ಟಿನಲ್ಲಿ ಪ್ರತಿಯೊಂದು ರೈತ ಆಸಕ್ತ ಗುಂಪುಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡಿದ್ದ ಪದ್ಧತಿಗಳನ್ನು ಕೈ ಬಿಟ್ಟು ಪರಿಸರ ಹಾಳಾಗಲು ಕಾರಣರಾಗಿದ್ದೇವೆ. ಪ್ರತಿಯೊಬ್ಬರೂ ಗಿಡನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಕೆರೆ, ಕುಂಟೆ, ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸಬೇಕು. ಅರಳಿ ಮರವೊಂದು ಹಳ್ಳಿಯಲ್ಲಿದ್ದರೆ ಆಮ್ಲಜನಕದ ಕಾರ್ಖಾನೆಯಿದ್ದಂತೆ. ಅರಳಿ ಮರವೊಂದು ಗಂಟೆಗೆ 2,252 ಕಿಲೋ ಇಂಗಾಲದ ಡಯಾಕ್ಸೈಡ್ ಹೀರಿಕೊಂಡು 1,712 ಕಿಲೋ ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯು ರೈತರಿಂದ ರೈತರಿಗಾಗಿ ರೈತರೇ ಸ್ಥಾಪಿಸಿರುವ ಸಂಸ್ಥೆ. ರೈತರ ಅನುಕೂಲಕ್ಕಾಗಿ ಕಂಪನಿಯು ತೆರೆದಿರುವ ಮಾರಾಟ ಮಳಿಗೆಯಿಂದ ತಮಗೆ ಬೇಕಾದ ಪೇಪರ್, ಫಾರ್ಮಲಿನ್ ಮುಂತಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ ಮಾತನಾಡಿ, ರೇಷ್ಮೆ ಇಲಾಖೆಯು ರೈತರಲ್ಲಿ ಜಾಗೃತಿ ಮೂಡಿಸುತ್ತಾ ಸಹಾಯಧನಗಳನ್ನು ನೀಡಿ ತಾಂತ್ರಿಕತೆಯನ್ನು ಒದಗಿಸುತ್ತಿದೆ. ಈಗ ಮೈರಾಡ ಸಂಸ್ಥೆಯ ಸಹಕಾರದಿಂದ ರೇಷ್ಮೆ ರೈತ ಆಸಕ್ತ ಗುಂಪುಗಳ ಮೂಲಕ ರೇಷ್ಮೆ ಬೆಳೆಗಾರರನ್ನು ಒಗ್ಗೂಡಿಸಿ ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಶಕ್ತಿ ಪಡೆಯುವಂತೆ ಮಾಡಲು ಶ್ರಮಿಸುತ್ತಿದೆ. ಇದು ಶ್ಲಾಘನೀಯ ಎಂದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿ.ಇ.ಒ ಕೆ.ಎನ್.ಜನಾರ್ಧನ ಮೂರ್ತಿ ಮಾತನಾಡಿ, ಈ ದಿನ ನಾವು ವಿತರಿಸುತ್ತಿರುವ ಗಿಡಗಳ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸುಂದರಗೊಳಿಸಲು ತಮ್ಮ ಹಸಿರು ಕಾಣಿಕೆಯನ್ನು ಗಿಡಗಳನ್ನು ಬೆಳೆಸುವ ಮೂಲಕ ನೀಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹೆಬ್ಬೇವು, ಬಾದಾಮಿ, ಸಿಲ್ವರ್ ಓಕ್, ಹುಣಸೆ, ಗುಲ್ಮೊಹರ್, ಬೆಟ್ಟದ ನೆಲ್ಲಿ ಮುಂತಾದ ಜಾತಿಗಳ 150 ಗಿಡಗಳನ್ನು ರೈತರಿಗೆ ಅರಣ್ಯ ಇಲಾಖೆಯ ಸಹಕಾರದಿಂದ ಉಚಿತವಾಗಿ ನೀಡಲಾಯಿತು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಖಜಾಂಸಿ ಆರ್.ದೇವರಾಜ್, ರೇಷ್ಮೆ ನಿರೀಕ್ಷಕ ಜಗದೇವಪ್ಪ ಗುಗ್ಗರಿ, ಮುನಿರಾಜು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ನಿರ್ದೇಶಕ ನರಸಿಂಹಮೂರ್ತಿ ಹಾಜರಿದ್ದರು.

error: Content is protected !!