ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆತ್ಮಾ ಯೋಜನೆಯಡಿ ಬುಧವಾರ ಏರ್ಪಡಿಸಲಾಗಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ವೆಂಕಟೇಶ್ ಮಾತನಾಡಿದರು.
ಮಣ್ಣಿನ ಫಲವತ್ತತೆಯನ್ನು ಆಧರಿಸಿ ಭೂಮಿಗೆ ಪೋಷಕಾಂಶಗಳನ್ನು ನೀಡುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಅವರು ಹೇಳಿದರು.
ಇತ್ತೀಚೆಗೆ ದಿನೇ ದಿನೇ ಮಣ್ಣು ವಿವಿಧ ರೀತಿಯ ಮಾಲಿನ್ಯದಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚಾದಂತೆ ಮಣ್ಣಿನಲ್ಲಿರಬೇಕಾದ ಪೋಷಕಾಂಶ ಮಟ್ಟ ಕಡಿಮೆಯಾಗುತ್ತದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಾಸವುಂಟಾದರೆ ಅದು ನಾವು ಸೇವಿಸುವ ಆಹಾರ, ನೀರು, ಗಾಳಿಯ ಮೇಲೆ ಪರಿಣಾಮ ಬೀರಿ ಪರಿಸರ ಹಾಳಾಗುತ್ತದೆ. ಆಧ್ದರಿಂದ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಗುಣಮಟ್ಟದ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಮಣ್ಣು ವಿಜ್ಞಾನಿ ಡಾ.ನಳಿನಿ ಮಾತನಾಡಿ, ರೈತರು ಬೆಳೆ ಬೆಳೆಯುವ ಅವಸರದಲ್ಲಿ ಸಿಕ್ಕ ಸಿಕ್ಕ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಮಣ್ಣಿನಲ್ಲಿರುವ ಸತ್ವಾಂಶ ನಶಿಸುತ್ತದೆ. ಹಾಗಾಗಿ ಮಣ್ಣಿನ ಆರೋಗ್ಯ ಕಾಪಾಡಲು ಬೇಕಾದ ಅಗತ್ಯ ಕ್ರಮಗಳನ್ನು ರೈತರು ಅನುಸರಿಸಬೇಕು ಎಂದರು. ರೈತರು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಬುದ್ಧಿವಂತಿಕೆಯಿಂದ ತಾಂತ್ರಿಕತೆಯನ್ನು ಬಳಸಿಕೊಂಡು ಗುಣಮಟ್ಟದ ಕೃಷಿ ಮಾಡಿದಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗುತ್ತದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾಲತೇಶ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹಲವು ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿರುವ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಕೃಷಿ ಅಧಿಕಾರಿಗಳಾದ ಶ್ರೀನಿವಾಸ್, ಡಿ.ಟಿ.ಗೋಪಾಲರಾವ್, ಆತ್ಮಾ ವಿಭಾಗದ ತಾಂತ್ರಿಕ ವ್ಯವಸ್ಥಾಪಕ ಅಶ್ವತ್ಥನಾರಾಯಣ, ರೈತ ಮುಖಂಡರಾದ ವೆಂಕಟಸ್ವಾಮಿರೆಡ್ಡಿ, ಬೆಳ್ಳೂಟಿ ಕೆಂಪಣ್ಣ, ತಾದೂರು ಮಂಜುನಾಥ್, ಮುನಿನಂಜಪ್ಪ, ಆತ್ಮಾ ಸಿಬ್ಬಂದಿ ಹಾಗೂ ಅನುವುಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.