Home News ವಿಶ್ವ ಯೋಗದಿನಕ್ಕಾಗಿ ಅಂಚೆ ಇಲಾಖೆಯ ವಿಶಿಷ್ಠ ಮೊಹರು

ವಿಶ್ವ ಯೋಗದಿನಕ್ಕಾಗಿ ಅಂಚೆ ಇಲಾಖೆಯ ವಿಶಿಷ್ಠ ಮೊಹರು

0

ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳ ವತಿಯಿಂದ ಯೋಗ ದಿನಾಚರಣೆಯನ್ನು ಯೋಗಾಸನಗಳನ್ನು ಮಾಡುವ ಮೂಲಕ ಮತ್ತು ಯೋಗದ ಉಪಯುಕ್ತತೆಯನ್ನು ವಿವರಿಸುವ ಮೂಲಕ ಆಚರಿಸಲಾಗುತ್ತಿದೆ.
ಇವರೊಂದಿಗೆ ಅಂಚೆ ಕಚೇರಿಯವರೂ ತಮ್ಮದೇ ಆದ ರೀತಿಯಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ನಗರದ ಅಂಚೆ ಕಚೇರಿಯಲ್ಲಿ ವಿಶ್ವ ಯೋಗದಿನಕ್ಕಾಗಿಯೇ ವಿಶಿಷ್ಠವಾದ ರದ್ದುಪಡಿಸುವ ಮೊಹರನ್ನು ಮಾಡಿಸಿದ್ದಾರೆ.
ಪ್ರತಿಯೊಂದು ಪತ್ರವನ್ನೂ ರವಾನೆ ಮತ್ತು ಸ್ವೀಕಾರ ಮಾಡುವ ಅಂಚೆ ಕಚೇರಿಯವರು ಊರಿನ ಹೆಸರು ಮತ್ತು ದಿನಾಂಕದ ಮೊಹರನ್ನು ಹಾಕುವುದು ಪದ್ಧತಿ. ಆದರೆ ಮಂಗಳವಾರ ವಿಶ್ವ ಯೋಗದಿನದ ಪ್ರಯುಕ್ತ ಪದ್ಮ ಪರ್ವತಾಸನದ ಚಿತ್ರ, ಜೂನ್ 21 ತಾರೀಖನ್ನು ನಮೂದಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಎಂದು ಬರೆದಿದ್ದು, ಜೊತೆಯಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಎಂದು ಬರೆಯಲಾಗಿದೆ.
‘ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಅಂಚೆ ಮೊಹರನ್ನು ರೂಪಿಸಬೇಕೆಂದು ನಮಗೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಈ ರೀತಿಯ ಮೊಹರನ್ನು ಮಾಡಿಸಿದ್ದೇವೆ. ಅಂಚೆ ಚೀಟಿ ಸಂಗ್ರಹಕಾರರು ರಾಜ್ಯದ ವಿವಿದೆಡೆ ಇರುವ ವಿಭಿನ್ನ ರೀತಿಯ ಮೊಹರು ಬಿದ್ದ ಲಕೋಟೆಗಳನ್ನೂ ಸಂಗ್ರಹಿಸುತ್ತಾರೆ. ಇದು ಕೇವಲ ಈ ದಿನ ಅಂದರೆ ಜೂನ್ 21 ರಂದು ಮಾತ್ರ ಬಳಸುವುದರಿಂದ ಸಂಗ್ರಹಕಾರರೂ ಬಂದು ಕಾರ್ಡುಗಳಲ್ಲಿ ಮೊಹರನ್ನು ಹಾಕಿಸಿಕೊಂಡು ತಮ್ಮ ಆಪ್ತರಿಗೆ ಕಳುಹಿಸಿದರು ಮತ್ತು ತಮಗೂ ತೆಗೆದಿರಿಸಿಕೊಂಡರು’ ಎಂದು ಉಪ ಅಂಚೆ ಪಾಲಕರಾದ ಪ್ರಭಾವತಿ ತಿಳಿಸಿದರು.