ವೈ.ಹುಣಸೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣದ ಹಂತದಲ್ಲಿರುವುದರಿಂದ ಗ್ರಾಮ ಪಂಚಾಯತಿಯವರು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಳೆಯ ಪಂಚಾಯತಿ ಕಟ್ಟಡವನ್ನೇ ಆಸ್ಪತ್ರೆಗೆ ಬಿಟ್ಟುಕೊಟ್ಟಿದ್ದಾರೆ. ಸುತ್ತಮುತ್ತಲಿನ ಸುಮಾರು 15 ಗ್ರಾಮಗಳ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ವೈದ್ಯರು ಇದ್ದೂ ಇಲ್ಲದಂತಿದ್ದಾರೆ. ಡಾ.ಸತ್ಯನಾರಾಯಣರೆಡ್ಡಿ ಎಂಬುವವರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಬಾಗೇಪಲ್ಲಿ ತಾಲ್ಲೂಕಿನ ಶಿವಪುರ ಹಾಗೂ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ಇವರು ವಾರಕ್ಕೆ ತಲಾ ಮೂರು ದಿನ ಕೆಲಸ ಮಾಡಬೇಕಿದೆ. ಆದರೆ ಆ ಮೂರು ದಿನಗಳಲ್ಲೂ ಆಸ್ಪತ್ರೆಗೆ ಸರಿಯಾಗಿ ಬರದೆ ದಾದಿಯಿಂದ ಚಿಕಿತ್ಸೆ ಪಡೆಯುವಂತಾಗಿದೆ. ಸರ್ಕಾರದಿಂದ ಔಷಧಿ ಪೂರೈಕೆ ಇದ್ದರೂ ಖಾಸಗಿ ಔಷಧಿ ಅಂಗಡಿಗೆ ಬರೆದುಕೊಡುತ್ತಾರೆ. ಇದರಿಂದ ಬಡಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಮ್ಮ ತೊಂದರೆಯನ್ನು ವಿವರಿಸಿದರು.
ಸರ್ಕಾರಿ ಆಸ್ಪತ್ರೆಯು ಗ್ರಾಮೀಣ ಜನರ ಅನುಕೂಲಕ್ಕಾಗಿ ಮಾಡಿದ್ದರೂ ಸರಿಯಾದ ಸಮಯಕ್ಕೆ ತೆರೆಯುತ್ತಿಲ್ಲ. ಮನಸೋ ಇಚ್ಛೆ ದಾದಿಯು ಬಂದಾಗ ಆಸ್ಪತ್ರೆಯನ್ನು ತೆರೆಯುತ್ತಾರೆ. ವಯಸ್ಸಾದವರು, ಮಕ್ಕಳು, ಗ್ರಾಮೀಣ ಮಹಿಳೆಯರು ಸೂಕ್ತ ಚಿಕಿತ್ಸೆಯಿಲ್ಲದೆ ಆಸ್ಪತ್ರೆಯಲ್ಲಿ ಕಾಯುತ್ತಿರುತ್ತಾರೆ. ಇತ್ತ ನಗರಕ್ಕೆ ಹೋಗಲು ಸಾಧ್ಯವಾಗದೆ ಅತ್ತ ಚಿಕಿತ್ಸೆಯೂ ಸಿಗದೆ ರೋಗಿಗಳು ಕಷ್ಟಪಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಮಾಡುವ ಉದ್ದೇಶವೇ ಇಲ್ಲಿ ಈಡೇರದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.