Home News ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯೆ ಕಲಿಯಿರಿ

ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯೆ ಕಲಿಯಿರಿ

0

ಹೊಟ್ಟೆಪಾಡಿಗಾಗಿ ವಿದ್ಯೆ ಕಲಿಯಬಾರದು. ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯೆಗೆ ಮಹತ್ವ ನೀಡಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಜೀ ಮಹಾರಾಜ್‌ ತಿಳಿಸಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜವಾಬ್ದಾರಿಗಳನ್ನು ಹೆಗಲೆ ಮೇಲೆ ಹೊತ್ತುಕೊಂಡಷ್ಟೂ ಶ್ರೇಷ್ಠವಾದ ಚಿಂತನೆಗಳು ಮೂಡುತ್ತವೆ ಮತ್ತು ವ್ಯಕ್ತಿತ್ವ ಅರಳುತ್ತದೆ. ಅನಾವಶ್ಯಕ ವಿಚಾರಗಳೆಡೆಗೆ ಗಮನ ಹರಿಯುವುದಿಲ್ಲ. ತಪ್ಪುಗಳನ್ನು ಮಾಡದಂತೆ ಜೀವನ ಮಾಡುವುದನ್ನು ಕಲಿತವರನ್ನು ಮಾತ್ರ ವಿದ್ಯಾವಂತರೆನ್ನುತ್ತಾರೆ. ಶಕ್ತಿಯನ್ನು ಅನಾವಶ್ಯಕ ಸಂಗತಿಗಳಿಗೆ ವ್ಯಯಿಸಬೇಡಿ. ಸಾರ್ಥಕ ಕೆಲಸಗಳನ್ನು ಮಾಡಿ. ಆಲೋಚನೆಗಳು ಉನ್ನತ ಮಟ್ಟದಲ್ಲಿದ್ದಾಗ ಮಾತ್ರ ಸಂತಸದಿಂದಿರುತ್ತೀರಿ. ಸಕಾರಾತ್ಮಕ ಭಾವನೆಗಳಿಗೆ ಮಾತ್ರ ಹೃದಯದಲ್ಲಿ ಪ್ರವೇಶ ಮಾಡಲು ಅವಕಾಶ ನೀಡಿ ಎಂದು ಹೇಳಿದರು.
ನಿಮ್ಹಾನ್ಸ್‌ ಮನೋವೈದ್ಯಕೀಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಸಿ.ಆರ್‌.ಚಂದ್ರಶೇಖರ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಮುಖ್ಯ. ಮೊಬೈಲ್‌, ಟೀವಿ, ಬೈಕ್‌ ಮೊದಲಾದ ಆಕರ್ಷಣೆಗಳಿಗೆ ಚಂಚಲ ಮನಸ್ಸು ಈಡಾಗದಂತೆ ಎಚ್ಚರವಹಿಸಿ. ಪ್ರತಿ ದಿನ ಹಣ್ಣು ಮತ್ತು ತರಕಾರಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು. ಮಕ್ಕಳು ಓದುವ ಸಮಯದಲ್ಲಿ ಪೋಷಕರು ಟೀವಿ ಹಾಕಬೇಡಿ, ಅವರ ಓದಿಗೆ ಸಹಕರಿಸಿ. ಲಿಖಿತ ರೂಪದಲ್ಲಿ ಪರೀಕ್ಷೆ ಇರುವುದರಿಂದ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಸ್ಫುಟವಾಗಿ, ಸುಂದರವಾಗಿ ಬರೆಯಬೇಕು. ಓದುವುದು, ಬರೆಯುವುದು, ಮನನ ಮಾಡುವುದು, ಸ್ಮರಣೆ ಮಾಡುವುದು ಬಹಳ ಮುಖ್ಯ. ಕಂಠಪಾಠ ಮಾಡಬೇಡಿ. ಅದು ಅಲ್ಪಕಾಲೀನ ಸ್ಮರಣೆಯಷ್ಟೆ. ಅರ್ಥಮಾಡಿಕೊಂಡು ಓದಿ ಎಂದು ಹೇಳಿದರು.
ಅನ್ನ ನೀಡುವ ಕೃಷಿಯಂಥ ಕಾಯಕವನ್ನು ನಿರ್ಲಕ್ಷಿಸಲಾಗುತ್ತಿದೆ. ಜೀವನಕ್ಕೆ ಅಗತ್ಯವಿರುವ ವೃತ್ತಿಗಳನ್ನು ಆಯ್ದುಕೊಂಡು ಹಣ, ಹೆಸರು ಮತ್ತು ಸಮಾಜದಲ್ಲಿ ಸ್ಥಾನಮಾನಗಳನ್ನು ಗಳಿಸಬಹುದು. ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ಓದು, ತರಬೇತಿ, ವೃತ್ತಿ ಸಾಧ್ಯತೆಗಳ ಕುರಿತು ಮಾರ್ಗದರ್ಶನ ಅಗತ್ಯವಿದೆ. ಜಗತ್ತಿನಲ್ಲಿ ಬಿ.ಪಿ, ಮಧುಮೇಹ, ಥೈರಾಯ್ಡ್‌, ಅಲ್ಸರ್‌, ಕ್ಯಾನ್ಸರ್‌ ಮೊದಲಾದ ಗುಣಪಡಿಸಲಾಗದ ರೋಗಗಳಿಗೆ ಮೂಲ ಕಾರಣ ಚಿಂತೆ. ಚಿತೆ ಶವವನ್ನು ಸುಡುತ್ತೆ, ಚಿಂತೆ ಜೀವಂತ ಮನುಷ್ಯನನ್ನೇ ಸುಡುತ್ತದೆ. ಸಮಸ್ಯೆಯನ್ನು ಎದುರಿಸಿ ಚಿಂತಿಸಬೇಡಿ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಾದ ಸಿ.ಎನ್‌.ರತ್ನಮ್ಮ, ಪಿ.ಗೋದಾವರಿ ಮತ್ತು ದಿವಂಗತ ಕೃಷ್ಣಮೂರ್ತಿ ಅವರ ಪತ್ನಿ ವಿಜಯಮ್ಮ ಅವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ದಕ್ಷಿಣ ರೈಲ್ವೆ ವಲಯದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್‌.ಎಸ್‌.ಶ್ರೀಧರಮೂರ್ತಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್‌.ರಾಮಾಂಜನಪ್ಪ, ಕಾರ್ಯದರ್ಶಿ ಮಳ್ಳೂರು ಶಿವಣ್ಣ, ಪ್ರಾಂಶುಪಾಲ ಚಂದ್ರಕುಮಾರ್‌, ಗೋಪಾಲಪ್ಪ, ಮಳ್ಳೂರು ಹರೀಶ್‌, ಸುರೇಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.