Home News ‘ಶಾಮಂತಿ’ಯಲ್ಲಿ ಪುಟ್ಟ ಪುಟ್ಟ ಮಕ್ಕಳ ಭಾವನಾ ಜಗತ್ತಿನ ಅನಾವರಣ

‘ಶಾಮಂತಿ’ಯಲ್ಲಿ ಪುಟ್ಟ ಪುಟ್ಟ ಮಕ್ಕಳ ಭಾವನಾ ಜಗತ್ತಿನ ಅನಾವರಣ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಶನಿವಾರ ಪುಸ್ತಕವೊಂದು ಬಿಡುಗಡೆಯಾಯಿತು. ಅದರ ಹೆಸರು ‘ಶಾಮಂತಿ–7’. ಅದನ್ನು ಬರೆದವರು ಹೆಸರಾಂತ ಸಾಹಿತಿಯಲ್ಲ. ಆದರೆ ಪುಟ್ಟ ಪುಟ್ಟ ಸರ್ಕಾರಿ ಶಾಲೆಯ ಮಕ್ಕಳು ಎಂಬುದು ವಿಶೇಷ.
‘ಮಕ್ಕಳ ಗೀಚುಗಳಲ್ಲಿ ಗೋಚರಿಸಿದ ಬೆಳಕು!’ ಎಂದು ಅದರ ಸಂಪಾದಕ ಹಾಗೂ ಶಿಕ್ಷಕ ಎಸ್.ಕಲಾಧರ್ ಅದನ್ನು ಬಣ್ಣಿಸಿರುವುದು ಅನ್ವರ್ಥಕವಾಗಿದೆ. ‘ಪುಸ್ತಕ ಪರೀಕ್ಷೆಗಳಾಚೆ ಒಂದು ಮಕ್ಕಳ ಲೋಕವಿದೆ. ಅಲ್ಲಿಯೂ ಮಕ್ಕಳು ಕಲಿಯುತ್ತಾರೆ, ನಲಿಯುತ್ತಾರೆ. ಆ ಲೋಕವನ್ನು ತೆರೆದಿಡುವ ಪ್ರಯತ್ನ ಶಾಮಂತಿ’ ಎನ್ನುವ ಅವರು ಮಕ್ಕಳಿಂದ ಚಿತ್ರ, ಕಥೆ, ಕವನ ಬರೆಸಿ ಪುಟ್ಟ ಮಕ್ಕಳ ಜೀವನಾನುಭವಗಳನ್ನು ಒಂದೆಡೆ ಕ್ರೂಡೀಕರಿಸಿ ಪುಸ್ತಕವನ್ನಾಗಿಸಿದ್ದಾರೆ.
‘ಈ ಪುಸ್ತಕದಲ್ಲಿರುವ ಸಣ್ಣ ಸಣ್ಣ ಬರಹಗಳು ಮತ್ತು ಅವುಗಳಿಗೆ ಜೀವ ತುಂಬುವ ಬರಹಗಳು ಯಾವುದೇ ನೆರವಿಲ್ಲದೇ ಮಕ್ಕಳೇ ಬರೆದವುಗಳು. ದೊಡ್ಡ ಶಾಲೆಗಳು ಹಣ ಸುರಿದು ವಾರ್ಷಿಕ ಸಂಚಿಕೆಗಳನ್ನು ಹೊರತರುತ್ತವೆ. ಸಹಜವಾಗಿರದ ಜೀವವಿರದ ಎಲ್ಲೋ ಸಂಗ್ರಹಿಸಿದ ಬರಹಗಳು ಅವುಗಳಲ್ಲಿರುತ್ತವೆ. ಆದರೆ ಇಲ್ಲಿ ಜೀವವಿದೆ. ನಮಗೆ ಇದನ್ನು ರೂಪಿಸಿದ ಹೆಮ್ಮೆಯಿದೆ. ನಮಗೆ ಇದನ್ನು ಪ್ರಕಟಿಸಲು ನಮ್ಮೂರ ಸ್ನೇಹ ಯುವಕ ಸಂಘದ ಸಹಕಾರವಿದೆ. ಸಹ ಶಿಕ್ಷಕಕರ ಸಹಯೋಗವಿದೆ’ ಎನ್ನುತ್ತಾರೆ ಎಸ್.ಕಲಾಧರ್.
ಸತತವಾಗಿ ಏಳು ವರ್ಷಗಳಿಂದ ಮಕ್ಕಳ ಬರಹಗಳನ್ನು ಪುಸ್ತಕವನ್ನಾಗಿಸುತ್ತಾ ಬಂದ ಇವರ ಪ್ರಯತ್ನಕ್ಕೆ ರಾಜ್ಯಾದ್ಯಂತ ಪ್ರಶಂಸೆ ಪುರಸ್ಕಾರಗಳು ಲಭಿಸಿವೆ. ‘ಶಾಮಂತಿ–7’ ಪುಸ್ತಕದಲ್ಲಿ ತಮ್ಮ ಸೈಕಲ್, ಅಪ್ಪ, ಮನೆ, ಚಿಟ್ಟೆ, ಹಬ್ಬ, ದೇವಸ್ಥಾನ, ಮರ, ನಾಯಿ, ಬೆಕ್ಕು, ಹಂದಿ, ಎಮ್ಮೆ ಹೀಗೆ ತಾವು ಕಂಡದ್ದು ಅನುಭವಿಸಿದ್ದನ್ನೆಲ್ಲಾ ಬರೆದಿದ್ದಾರೆ.
ಬೇಜಾರು, ಒಯ್ದರು, ಜಾಸ್ತಿ, ಇಸ್ಕೊಂಡು, ಇಕ್ಕುತ್ತೇನೆ, ಇತ್ತ, ತೀಟ್ಲೆ, ತರಿಮಿಕೊಂಡು, ಕಿತ, ಕಲ್ದೀರ ಮುಂತಾದ ಪದಗಳನ್ನು ಬಳಸಿರುವ ಮಕ್ಕಳ ಮಾತುಗಳಲ್ಲಿ ಜಿಲ್ಲೆಯ ಸೊಗಡಿನ ಭಾಷೆಯು ಅನಾವರಣಗೊಂಡಿದೆ. ‘ಹಳ್ಳಿಯಲ್ಲಿ ಕಾಸಿರದಿದ್ರೂ ಬದುಕಬಹುದು, ಬೆಂಗಳೂರಿನಲ್ಲಿ ಬದುಕೋಕಾಗಲ್ಲ’, ‘ಬೋರ್ವೆಲ್ ಅವರಿಗೆ ನೀರು ಬಿದ್ದರೂ ಕಾಸು ಕೊಡಬೇಕು. ಬೀಳದಿದ್ರೂ ಕೊಡಬೇಕು’, ‘ಮರಿಯನ್ನು ಕಳೆದುಕೊಂಡ ಎಮ್ಮೆಯ ನೋವು’, ‘ಹಂದಿಮರಿಗೆ ಕಾಳು ಮುರಿದಾಗ ಆದ ನೋವು’, ‘ಕೋತಿಗಳ ವರ್ತನೆ’, ‘ಗಾಳಕ್ಕೆ ಬಿದ್ದ ಮೀನನ್ನು ಮೂರು ಸಲ ಉಗಿದು ನೀರಿಗೆ ಬಿಡುವುದು’, ‘ಮರದಲ್ಲಿ ದೇವರಿದ್ದಾನೆ’ ಮುಂತಾದವುಗಳಿಂದ ಮಕ್ಕಳ ಆಲೋಚನಾ ಕ್ರಮ, ಮುದ್ಧತೆ, ಮನೋಲೋಕ ಹಿರಿಯರಿಗೆ ಪಾಠದಂತಿದೆ. ಬರೆಯುವಾಗ ಮಕ್ಕಳು ಅನುಭವಿಸಿರುವ ಖುಷಿ ಓದುವಾಗ ಅನುಭವಕ್ಕೆ ಬರುತ್ತದೆ.
‘ಮಕ್ಕಳು ತಮ್ಮ ಕನಸು, ಕಲ್ಪನೆ, ಭಾವನೆಯನ್ನು ಅಭಿವ್ಯಕ್ತಿಸಲು ಸೂಕ್ತ ಪರಿಸರವನ್ನು ನಿರ್ಮಿಸುವುದೇ ಶಿಕ್ಷಣದ ಮೂಲ ಉದ್ದೇಶ. ಕನ್ನಮಂಗಲ ಸರ್ಕಾರಿ ಶಾಲೆ ಈ ನಿಟ್ಟಿನಲ್ಲಿ ಶಾಮಂತಿ ಹೊರತರುತ್ತಿರುವುದು ಇತರರಿಗೆ ಮಾದರಿಯಾಗಿದೆ’ ಎಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದ ಶಿಕ್ಷಣ ತಜ್ಞ ಕೋಡಿರಂಗಪ್ಪ ತಿಳಿಸಿದ್ದಾರೆ.

error: Content is protected !!