Home News ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದ ಯುವ ಬ್ರಿಗೇಡ್ ಸದಸ್ಯರು

ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದ ಯುವ ಬ್ರಿಗೇಡ್ ಸದಸ್ಯರು

0

ನಗರದ ಅಗ್ರಹಾರ ಬೀದಿಯಲ್ಲಿರುವ ಅತ್ಯಂತ ಪುರಾತನ ಕಲ್ಯಾಣಿಯಾದ ಶಾಮಣ್ಣಬಾವಿಯನ್ನು ಯುವ ಬ್ರಿಗೇಡ್ ಸದಸ್ಯರು ಶ್ರಮದಾನ ಮಾಡುವ ಮೂಲಕ ಶನಿವಾರ ಮತ್ತು ಭಾನುವಾರ ಶುಚಿಗೊಳಿಸಿದ್ದಾರೆ.
ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು ೩೫೦ ವರ್ಷಕ್ಕೂ ಹಿಂದೆ ಇಲ್ಲಿನ ದೇವಾಲಯದ ಬಳಿ ಚತುಷ್ಕೋನಾಕಾರದ ಕಲ್ಯಾಣಿ ನಿರ್ಮಿಸಿದ್ದರು. ಅದರಿಂದಲೇ ಜನರ ಬಾಯಿಯಲ್ಲಿ ಇದು ಶಾಮಣ್ಣಬಾವಿಯೆಂದೇ ಪ್ರಚಲಿತವಾಗಿದೆ. ಇಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಮರವಿರುವ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ವಿಷ್ಣು ಮತ್ತು ಶಿವ ಒಂದೆಡೆ ಎಲ್ಲೂ ಕಣಸಿಗರು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಇದರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ.
ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕಲಿಯುವ ತಾಣವಾಗಿತ್ತು. ಆದರೆ ನೀರಿನ ಬವಣೆ ಪ್ರಾರಂಭವಾದಂತೆ ಶಾಮಣ್ಣಬಾವಿಯಲ್ಲಿ ಕೇವಲ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುವಂತಾಯಿತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ನಿಲ್ಲುವಂತಾದ ಮೇಲೆ ಅಲ್ಲಿಂದ ಶಾಮಣ್ಣಬಾವಿಗೆ ನೀರು ಬರದೆ ಸೊರಗತೊಡಗಿತು. ಕಲ್ಲುಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ ತ್ಯಾಜ್ಯ ತುಂಬಿಕೊಂಡು ಬಾವಿಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳತೊಡಗಿತು.
ಶಾಮಣ್ಣ ಬಾವಿಯಲ್ಲಿ ನೀರು ನಿಂತರೆ ಅಂತರ್ಜಲ ಹೆಚ್ಚುವ ಮೂಲಕ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತದೆ. ಮಳೆಗಾಲಕ್ಕೆ ಮುನ್ನ ನಮ್ಮ ಹಿರಿಯರು ನಿರ್ಮಿಸಿರುವ ಈ ಅಮೂಲ್ಯವಾದ ಆಸ್ತಿಯನ್ನು ಶುಚಿಯಾಗಿರಿಸಿಕೊಳ್ಳುವ ಉದ್ದೇಶದಿಂದ ಶ್ರಮದಾನದ ಮೂಲಕ ಕಳೆಗಿಡಗಳನ್ನು ತೆಗೆದಿದ್ದೇವೆ. ತ್ಯಾಜ್ಯವನ್ನು ಹೊರಕ್ಕೆ ಹಾಕಿದ್ದೇವೆ ಎಂದು ಯುವ ಬ್ರಿಗೇಡ್ ಸದಸ್ಯರು ತಿಳಿಸಿದ್ದಾರೆ.
ಚಿರಾಗ್ಗೌಡ, ಮುರಳಿ, ಶ್ರೀನಿವಾಸ್, ಸುದಾಕರ್, ಸೂರಿ, ಯಶ್ವಂತ್, ನವೀನ್, ವೆಂಕಟೇಶ್, ಅಭಿ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.