Home News ಶಾಲಾ ವಿದ್ಯಾರ್ಥಿಗಳಿಗೆ ರೇಷ್ಮೆ ಪಾಠ

ಶಾಲಾ ವಿದ್ಯಾರ್ಥಿಗಳಿಗೆ ರೇಷ್ಮೆ ಪಾಠ

0

ಮೊಟ್ಟೆಯಿಂದ ರೇಷ್ಮೆ ಗೂಡು ರೂಪುಗೊಳ್ಳುವ ವಿವಿಧ ಹಂತಗಳ ನಿರ್ವಹಣೆ ಬಲು ಸೂಕ್ಷ್ಮವಾದದ್ದು. ಹವಾಮಾನ, ಸ್ವಚ್ಛತೆ, ಗುಣಮಟ್ಟ, ಸಾವಯವ ಪದ್ಧತಿ, ಹನಿನೀರಾವರಿ, ಮಾನವ ಶ್ರಮ ಮುಂತಾದ ಕಾರ್ಯಚಟುವಟಿಕೆಗಳಿರುತ್ತವೆ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿಯ ಗೋಪಾಲಗೌಡ ವಿವರಿಸಿದರು.

ವಿದ್ಯಾರ್ಥಿಗಳು ರೇಷ್ಮೆ ಹುಳು ಚಂದ್ರಂಕಿಯಲ್ಲಿ ಗೂಡು ಕಟ್ಟುವುದನ್ನು ಅಚ್ಚರಿಯಿಂದ ವೀಕ್ಷಿಸಿದರು.
ವಿದ್ಯಾರ್ಥಿಗಳು ರೇಷ್ಮೆ ಹುಳು ಚಂದ್ರಂಕಿಯಲ್ಲಿ ಗೂಡು ಕಟ್ಟುವುದನ್ನು ಅಚ್ಚರಿಯಿಂದ ವೀಕ್ಷಿಸಿದರು.
ಬೆಂಗಳೂರಿನ ಕೆ.ಆರ್.ಪುರಂ ಅಮರಜ್ಯೋತಿ ಶಾಲೆಯ 108 ವಿದ್ಯಾರ್ಥಿಗಳು ಗುರುವಾರ ಹಿತ್ತಲಹಳ್ಳಿಯ ರೈತ ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟ, ಹುಳುಮನೆಯನ್ನು ವೀಕ್ಷಿಸಿ ಅವರಿಂದ ರೇಷ್ಮೆಗೂಡು ಕಟ್ಟುವ ವಿವಿಧ ಹಂತಗಳ ಬಗ್ಗೆ ಮಾಹಿತಿ ಪಡೆದರು.
ಪ್ರಪಂಚದಲ್ಲಿ ಆಗುತ್ತಿರುವ ರೇಷ್ಮೆ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ದೇಶದಲ್ಲಿ ಉತ್ಪನ್ನವಾಗುವ ರೇಷ್ಮೆಯಲ್ಲಿ, ಕರ್ನಾಟಕದ ಕೊಡುಗೆ ಶೇಕಡಾ ೬೦ರಷ್ಟು ಇದೆ. ಹಿಪ್ಪುನೇರಳೆ ಬೇಸಾಯ ಮತ್ತು ಇದನ್ನು ಅವಲಂಬಿಸಿರುವ ಕೈಗಾರಿಕೆ ಹೆಚ್ಚು ಶ್ರಮದಾಯಕ, ವಿವಿಧ ಹಂತಗಳುಳ್ಳ ಒಂದು ಉದ್ಯಮ. ವಿವಿಧ ಹಂತಗಳ ಕಾರ್ಯಚಟುವಟಿಕೆಗಳಲ್ಲಿ ಶೇಕಡಾ ೬೦ರಷ್ಟು ಮಹಿಳೆಯರು ಭಾಗವಹಿಸುತ್ತಾರೆ ಎಂದು ವಿವರಿಸಿ ಚಾಕಿ ಹಂತದಿಂದ ಗೂಡಿನ ನಿರ್ಮಾಣದವರೆಗೂ ವಿವರಿಸಿದರು.
‘ಮಕ್ಕಳು ಪಠ್ಯದಲ್ಲಿ ಪುಸ್ತಕದಲ್ಲಿನ ಚಿತ್ರಗಳಲ್ಲಿ ಮಾತ್ರ ರೇಷ್ಮೆ ಹುಳು ಹಾಗೂ ಅದು ತಿನ್ನುವ ಹಿಪ್ಪುನೇರಳೆ ಸೊಪ್ಪನ್ನು ನೋಡಿರುತ್ತಾರೆ. ಆದರೆ ರೇಷ್ಮೆ ಹುಳು ಹಾಗೂ ಹಿಪ್ಪುನೇರಳೆ ಸೊಪ್ಪನ್ನು ಕೈಯಲ್ಲಿ ಮುಟ್ಟಿ ನೋಡಿ, ಅವುಗಳ ಜೀವನಕ್ರಮವನ್ನು ಕಣ್ಣಾರೆ ನೋಡಿದಾಗ ಮನಸ್ಸಿನಲ್ಲಿ ದಾಖಲಾಗುತ್ತದೆ. ಇದರೊಂದಿಗೆ ಮಕ್ಕಳಿಗೆ ರೈತ ಸಂಘರ್ಷ, ನೀರಿಗಾಗಿ ಹೋರಾಟ, ನೀರಿನ ಸದ್ಭಳಕೆ, ಸಾವಯವ ಮುಂತಾದ ವಿಷಯಗಳ ಬಗ್ಗೆಯೂ ತಿಳಿಸಿಕೊಟ್ಟು ಅವರನ್ನು ಮಣ್ಣಿನ ಮಕ್ಕಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಉದ್ದೇಶ’ ಎಂದು ಅಮರಜ್ಯೋತಿ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ತಿಳಿಸಿದರು.
ರೇಷ್ಮೆ ಬೆಳೆಗಾರ ಹಾಗೂ ರೀಲರ್ ರಾಮಕೃಷ್ಣಪ್ಪ, ಹಿತ್ತಲಹಳ್ಳಿಯ ವೆಂಕಟೇಶ್, ಎಚ್.ಜಿ.ಪುಟ್ಟೇಗೌಡ, ಮುನಿಕೃಷ್ಣ, ಅಮರಜ್ಯೋತಿ ಶಾಲೆಯ ಶಿಕ್ಷಕರಾದ ಶಾರದಾ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.