ಮಕ್ಕಳ ವಿವಿಧ ಚಟುವಟಿಕೆಗಳಿಂದ ಪಾಥ ಪ್ರವಚನಗಳಿಂದ ತುಂಬಿರುತ್ತಿದ್ದ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಶಾಲೆಯಲ್ಲಿ ಶುಕ್ರವಾರ ಎಂದಿನಂತಿರಲಿಲ್ಲ. ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಬೇಕಿದ್ದ ಮಕ್ಕಳೆಲ್ಲ ಮತದಾರರಾಗಿ ಬದಲಾಗಿ ಮತ ಚಲಾವಣೆಗೆ ಮತಗಟ್ಟೆ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾಲೆಯ ‘ರಾಜಕೀಯ’ದ ಅಖಾಡಕ್ಕೆ ಧುಮುಕ್ಕಿದ್ದ ವಿದ್ಯಾರ್ಥಿಗಳೆಲ್ಲ ಥೇಟ್ ರಾಜಕಾರಣಿಗಳಂತೆ ಸಹಪಾಠಿ ಮತದಾರರ ಮನ ಓಲೈಸುವ ಕಸರತ್ತು ನಡೆಸಿದ್ದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು.
ಚುನಾವಣಾ ಕಣದಲ್ಲಿ ನಿಂತಿದ್ದ ಅಭ್ಯರ್ಥಿಗಳು ಮತಯಾಚಿಸುವ ಪ್ರಕ್ರಿಯೆ ಮುಗಿದ ನಂತರ ಮತದಾನಕ್ಕಾಗಿ ಮತಗಟ್ಟೆಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಲಾಯಿತು. ಮತದಾನ ಬಹು ಶಿಸ್ತಿನಿಂದಲೇ ಜರುಗಿತು. ಭಾವಿ ಮತದಾರರು ಸರದಿ ಸಾಲಿನಲ್ಲಿ ನಿಂತು ಕೈಗೆ ಮಸಿ ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿದರು.
ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾಗಬೇಕಿದ್ದ ಫಲಿತಾಂಶ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾದಾಗ ಡಿ.ಲಕ್ಷ್ಮೀ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಳಿಕ ವಿವಿಧ ಖಾತೆಗಳನ್ನು ಹಂಚಲಾಯಿತು.
ಆರೋಗ್ಯ ಮಂತ್ರಿಯಾಗಿ ಅಮೃತಾ, ವಾರ್ತಾ ಸಚಿವರಾಗಿ ರಂಜನ್, ಹಣಕಾಸು ಸಚಿವರಾಗಿ ಮೋಹಿತ್, ವಿದ್ಯಾಮಂತ್ರಿಯಾಗಿ ತಿಲಕ್, ಸ್ವಚ್ಛತಾ ಮಂತ್ರಿಯಾಗಿ ಡಿ.ವರ್ಷಾ, ತೋಟಗಾರಿಕಾ ಮಂತ್ರಿಯಾಗಿ ಪವನ್, ನೀರಾವರಿ ಮಂತ್ರಿಯಾಗಿ ಚೇತನ್, ಕ್ರೀಡಾ ಮಂತ್ರಿಯಾಗಿ ಪುನೀತ್‌ರಾಜ್, ಉಸ್ತುವಾರಿ ಮಂತ್ರಿಯಾಗಿ ಎಂ.ಶಶಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ‘ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಇರಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬಹುದು. ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಬೇಕು. ಆ ದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
ಶಿಕ್ಷಕರಾದ ಎಸ್.ಚಾಂದ್‌ಪಾಷ, ಎಂ.ಭಾರತಿ, ವೆಂಕಟಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಸದಸ್ಯರಾದ ಮಂಜುನಾಥ್, ದಾಸಪ್ಪ, ನರಸಿಂಹಮೂರ್ತಿ ಹಾಜರಿದ್ದರು.