Home News ಶಾಲೆಯ ಪಕ್ಕದಲ್ಲೇ ರಾಶಿ ರಾಶಿ ಕಸ

ಶಾಲೆಯ ಪಕ್ಕದಲ್ಲೇ ರಾಶಿ ರಾಶಿ ಕಸ

0

ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದರಾಶಿ, ಮೂಗಿಗೆ ಬಡಿಯುವ ದುರ್ನಾತ, ಇವುಗಳ ನಡುವೆಯೇ ಇರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ನಗರದ ತಿಮ್ಮಯ್ಯ ಲೇಔಟ್ನಲ್ಲಿದೆ. ಈ ತ್ಯಾಜ್ಯದ ಹಾವಳಿಯಿಂದಾಗಿ ಮಕ್ಕಳು ವಿವಿಧ ಖಾಯಿಲೆಗಳಿಗೆ ತುತ್ತಾಗುವ ಭೀತಿ ಮೂಡಿದೆ.
ನಗರದ ೧೮ ನೇ ವಾರ್ಡಿನ ಆಜಾದ್ ನಗರದ ತಿಮ್ಮಯ್ಯ ಲೇಔಟ್ ನಲ್ಲಿ ಕಳೆದ ಎರಡು ತಿಂಗಳಿನಿಂದ ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡದಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿಯೂ ರಾಶಿ ರಾಶಿ ಕಸ ಸಂಗ್ರಹವಾಗಿದೆ.
ತಿಮ್ಮಯ್ಯ ಲೇ ಔಟ್ ನಲ್ಲಿರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಸುರಿದಿರುವ ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದು ಕಸದ ನಡುವೆಯೇ ಮಕ್ಕಳು ಓಡಾಡುವುದರಿಂದ ಮಕ್ಕಳಿಗೆ ವಿವಿಧ ಖಾಯಿಲೆ ಬರುವ ಭೀತಿಯಲ್ಲಿ ವಿದ್ಯಾಭ್ಯಾಸ ನಡೆಸುವಂತಾಗಿದೆ.
ಈ ಬಗ್ಗೆ ಸಾಕಷ್ಟು ಭಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯ ನಾಗರಿಕರು ಮತ್ತು ಪೋಷಕರು ಆರೋಪಿಸುತ್ತಾರೆ.
ಸಕಾಲದಲ್ಲಿ ಕಸ ವಿಲೇವಾರಿ ಮಾಡದ ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಸ್ತೆಗಳಲ್ಲಿ ಹಾಕಿರುವ ಕಸ ಕಡ್ಡಿ ಕೊಳೆತು ಹುಳುಗಳು ಬಿದ್ದು ಇದರಿಂದ ಬೀರುತ್ತಿರುವ ದುರ್ನಾತದಿಂದಾಗಿ ಇಲ್ಲಿನ ನಿವಾಸಿಗಳು ಪರಿತಪಿಸುವಂತಾಗಿದೆ.
ನಗರದ ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಬೇಕಾದ ಚುನಾಯಿತ ಜನಪ್ರತಿನಿಧಿಗಳಿಗೂ ನಗರದ ಸ್ವಚ್ಚತೆಯ ಬಗ್ಗೆ ಕಾಳಜಿಯಿಲ್ಲ. ನಾಗರಿಕರಿಗೆ ನೀಡಬೇಕಾದ ಮೂಲಭೂತ ಸವಲತ್ತುಗಳ ಬಗ್ಗೆಯಾಗಲಿ ಆಲೋಚನೆಯಿಲ್ಲ. ಹಾಗಾಗಿ ನಗರದಲ್ಲಿ ನಗರಸಭೆ ಅಸ್ಥಿತ್ವದಲ್ಲಿದೆಯೋ ಇಲ್ಲವೋ ಎಂಬ ಅನುಮಾನ ನಮ್ಮಲ್ಲಿ ಮೂಡಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

error: Content is protected !!