Home News ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ – ಹೆಚ್.ಡಿ.ಕುಮಾರಸ್ವಾಮಿ

ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ – ಹೆಚ್.ಡಿ.ಕುಮಾರಸ್ವಾಮಿ

0

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ 24 ಗಂಟೆಯೊಳಗೆ ರಾಜ್ಯದ ರೈತರ 58 ಸಾವಿರ ಕೋಟಿ ಸಾಲ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪ ಅವರ 5 ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರಿಗೆ ನಾಗರಿಕ ಪೌರಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದ ಅವರು ಬಯಲು ಸೀಮೆ ಪ್ರದೇಶದ ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಸೌಜನ್ಯಕ್ಕಾದರೂ ನಾವು ನಿಮ್ಮೊಂದಿಗಿದ್ದೇವೆ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳುವ ನೈತಿಕತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದರು.
ಉತ್ತರ ಭಾರತದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ನೀತಿಗಳಿಂದ ಕಾಂಗ್ರೆಸ್ ಧೂಳಿಪಟವಾಗಿದೆಯೇ ಹೊರತು ಅದು ನರೇಂದ್ರ ಮೋದಿ ಹಾಗು ಅಮಿತ್‍ಷಾ ತಂತ್ರಗಾರಿಕೆಯ ಫಲವಾಗಿ ಅಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗು ಅಮಿತ್ ಷಾ ತಂತ್ರಗಾರಿಕೆ ಕರ್ನಾಟಕದ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದರು.
ನಮಗೆ ದೆಹಲಿಯಲ್ಲಿ ಕುಳಿತು ಹಿಡಿತದಲ್ಲಿಟ್ಟುಕೊಳ್ಳುವ ರಾಷ್ಟ್ರೀಯ ಪಕ್ಷಗಳ ಸರ್ಕಾರದ ಅಗತ್ಯವಿಲ್ಲ ಬದಲಿಗೆ ನಮ್ಮದೇ ಹಿಡಿತದಲ್ಲಿರುವ ಯಾವುದೇ ಹೈಕಮಾಂಡ್ ಸಂಸ್ಕøತಿಯಿಲ್ಲದ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ದಿ ಇನ್ನಷ್ಟು ತ್ವರಿತವಾಗಿ ಆಗಲಿದೆ ಎಂದರು
ರಾಜ್ಯದ ಎಲ್ಲಾ ಸಮುದಾಯಗಳಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕಾದರೆ ಅದು ಕೇವಲ ಜೆಡಿಎಸ್ ನಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಇದೀಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆಯಿಲ್ಲ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು ಮುಂಬರುವ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿ ಜಯಗಳಿಸುವಷ್ಟು ಸಮರ್ಥವಾಗಿದೆ. ಪಕ್ಷವನ್ನು ಮುನ್ನಡೆಸುವಂತಹ ನಾಯಕರೂ ಪಕ್ಷದಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಸೇರಿದಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷವನ್ನು ಮತ್ತಷ್ಟು ಸದೃಡಗೊಳಿಸಬೇಕು ಎಂದರು.
ಜೆಡಿಎಸ್ ಮುಖಂಡ ಮೇಲೂರಿನ ಬಿ.ಎನ್.ರವಿಕುಮಾರ್ ಮಾತನಾಡಿ ಕಳೆದ 2008 ರಿಂದ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ದಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇವೆ. ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ರವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಪಕ್ಷವನ್ನು ಎಲ್ಲರ ಸಹಕಾರದಿಂದ ಸಂಘಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಯವರು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ಪಡಬೇಕೆಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಕೆಲ ನಗರಸಭೆ ಸದಸ್ಯರೂ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಮಾಲೂರಿನ ಕೆ.ಎಸ್.ಮಂಜುನಾಥಗೌಡ, ದೇವನಹಳ್ಳಿ ಪಿಳ್ಳ ಮುನಿಶಾಮಪ್ಪ, ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜಿ.ಪಂ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಜಯರಾಮರೆಡ್ಡಿ, ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ, ತಾ.ಪಂ ಅಧ್ಯಕ್ಷ ಲಕ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಹೆಚ್ ನರಸಿಂಹಯ್ಯ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಮತ್ತಿತರರು ಹಾಜರಿದ್ದರು.

ಮೇಲೂರಿನ ಬಿ.ಎನ್.ರವಿಕುಮಾರ್ ಅಧ್ಯಕ್ಷತೆಯಲ್ಲಿ ಹೆಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಚಾರಿಟೆಬಲ್ ಟ್ರಸ್ಟ್ (ರಿ) ಸ್ಥಾಪಿಸಿದ್ದು ಟ್ರಸ್ಟ್ ವತಿಯಿಂದ ತಾಲೂಕಿನ ಚಿಲಕಲನೇರ್ಪು, ಸಾದಲಿ ಹಾಗು ಜಂಗಮಕೋಟೆ ಹೋಬಳಿಗೆ ತಲಾ ಒಂದರಂತೆ ಮೂರು ಆಂಬುಲೆನ್ಸ್ ಸೇವೆ ಲೋಕಾರ್ಪಣೆ ಮಾಡಲಾಯಿತು. ತಾಲೂಕಿನಾಧ್ಯಂತ ಇರುವ ಬಡ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ಶಿಕ್ಷಣ ಪಡೆಯಲು ಶುಲ್ಕ ಹಾಗು ಉಚಿತ ಬಸ್ ಪಾಸ್ ವ್ಯವಸ್ಥೆಗೆ ತಗಲುವ ಶುಲ್ಕವನ್ನು ಟ್ರಸ್ಟ್ ಭರಿಸಲಿದೆ.