ಸಮಾಜದ ಪರಿವರ್ತಕರಾದ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಸ್ವಾಸ್ಥ್ಯ, ಸುಂದರ ಸಮಾಜ ನಿರ್ಮಾಣವಾಗಲು ತಳಪಾಯ ಬೀಳುವುದು ಶಾಲೆಗಳಲ್ಲಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ನಲ್ಲಿರುವ ಚನ್ನಮ್ಮ ದೇವೇಗೌಡರ ಕಲ್ಯಾಣಮಂಟಪದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು ಅಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರು ನಿಷ್ಟೆ, ಪ್ರಾಮಾಣಿಕತೆಯನ್ನು ಹೊಂದಿಕೊಳ್ಳುವುದರ ಜೊತೆಗೆ ದೂರದೃಷ್ಠಿ, ನಿರಂತರ ಅಧ್ಯಯನವನ್ನು ಹೊಂದಿಕೊಂಡು ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಮುಖ್ಯಭಾಷಣಕಾರರಾಗಿ ಮಾತನಾಡಿದ ಚಿಂತಾಮಣಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮುನಿರೆಡ್ಡಿ, ಶಿಕ್ಷಕರು ಕೇವಲ ಪಾಠಪ್ರವಚನಗಳನ್ನು ಬೋಧನೆ ಮಾಡಲು ಸೀಮಿತವಾಗಬಾರದು. ನಮ್ಮ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಕಾಳಜಿ ವಹಿಸಬೇಕು. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವ ಶಕ್ತಿ ಶಿಕ್ಷಕರಲ್ಲಿದೆ. ಆಗಾಧವಾದ ಪಾಂಡಿತ್ಯ ಹೊಂದಿಕೊಂಡು, ವಿದ್ಯಾರ್ಥಿಗಳಿಗೆ ಧಾರೆಯೆರೆಯಬೇಕು. ಅಧ್ಯಯನ, ಭೋದನೆ ಎರಡು ಕಣ್ಣುಗಳಾಗಬೇಕು. ವಿದ್ಯೆ ಯಾರೂ ಕದಿಯಲಾರದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಸಮಾಜದಲ್ಲಿನ ಗೌರವಸ್ಥಾನವನ್ನು ಕಾಪಾಡಿಕೊಳ್ಳಬೇಕು. ಜ್ಯಾತ್ಯಾತೀತ ಮನೋಭಾವನೆ ಹೊಂದಿಕೊಳ್ಳಬೇಕು. ಶಿಕ್ಷಕರು ರಾಜಕೀಯ ಪ್ರೇರಿತರಾಗಿರಬಾರದು. ಜಾತಿ ಭೇದ ಮರೆತು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ನಿರ್ಮಲಮುನಿರಾಜು ಮಾತನಾಡಿ, ಶಿಕ್ಷಕರು, ಮಕ್ಕಳನ್ನು ಸಮಾಜದಲ್ಲಿ ಪ್ರಜ್ಞಾವಂತರನ್ನಾಗಿ ನಿರ್ಮಾಣ ಮಾಡುವ ದೊಡ್ಡ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಯಾವುದೇ ವೃತ್ತಿಗೆ ಇಲ್ಲದೆ ಇರುವಷ್ಟು ಮಹತ್ವ ಶಿಕ್ಷಕ ವೃತ್ತಿಗಿದೆ, ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮರೆಯಲಾರದ ಏಕೈಕ ವ್ಯಕ್ತಿ, ಗುರು, ಒಬ್ಬ ಶಿಕ್ಷಕ ಮೈ ಮರೆತರೆ ಇಡೀ ವ್ಯವಸ್ಥೆ ಹಾಳಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶಕರಾಗಬೇಕು, ಆದರ್ಶಪ್ರಾಯರಾಗಬೇಕು ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ಶಿಕ್ಷಕರಿಗೆ ರಾಧಾಕೃಷ್ಣನ್ ಅವರು ಆದರ್ಶರಾಗಬೇಕು. ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ದೇಶದ ಸಂಪತ್ತನ್ನಾಗಿ ಮಕ್ಕಳನ್ನು ಸಿದ್ದಗೊಳಿಸಬೇಕು. ಮಕ್ಕಳಲ್ಲಿನ ಆಗಾಧವಾದ ಶಕ್ತಿಯನ್ನು ಹೊರಗೆಳೆಯುವಂತಹ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದರು.
ತಾಲ್ಲೂಕಿನಲ್ಲಿ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಶಿಕ್ಷಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್. ನರಸಿಂಹಯ್ಯ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಉಪಾಧ್ಯಕ್ಷೆ ಪ್ರಭಾವತಿಸುರೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಹಾಜರಿದ್ದರು.