Home News ಶಿಕ್ಷಕಿಯರು ಮಾತೃ ಸಮಾನರು

ಶಿಕ್ಷಕಿಯರು ಮಾತೃ ಸಮಾನರು

0

ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕಿಯರು ಮಾತೃ ಸಮಾನರು. ಶಾಲೆಯತ್ತ ಮಕ್ಕಳು ಆಕರ್ಷಿತರಾಗುವಂತೆ ಮಾಡಿ ಅವರನ್ನು ಕಲಿಯಲು ಪ್ರೇರೇಪಿಸುವುದು ನಿಜಕ್ಕೂ ಒಂದು ಕಲೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾದ ಶಾಲೆಯ ಮುಖ್ಯ ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಅವರನ್ನು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಗೌರವಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದರೊಂದಿಗೆ ಶಾಲೆಯ ಆಸ್ತಿಯನ್ನು ಉಳಿಸುವ, ಗಿಡಗಳನ್ನು ಬೆಳೆಸುವ, ದಾನಿಗಳ ಸಹಕಾರದಿಂದ ಶಾಲೆಗೆ ಹಾಗೂ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ಪಡೆಯುವ ಶಿಕ್ಷಕಿಯ ಸಾಧನೆ ಅನುಕರಣೀಯ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ, ಪ್ರೇರಣೆ, ಸಂಸ್ಕಾರ, ಮೌಲ್ಯಗಳು ಅವರನ್ನು ಸಾಧನೆಯ ಹಾದಿಗೆ ಕೊಂಡೊಯ್ಯಬಲ್ಲದು. ಈ ನಿಟ್ಟಿನಲ್ಲಿ ಶಾಲೆ ಹಾಗೂ ಶಾಲೆಯ ಮಕ್ಕಳ ಬಗ್ಗೆಯೇ ಸದಾ ತುಡಿತವನ್ನು ಹೊಂದಿರುವ ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಅವರ ಸೇವೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುತಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಸಹಕಾರವನ್ನು ನೀಡಿದವರನ್ನೆಲ್ಲಾ ನೆನೆದು, ಮಕ್ಕಳ ವಿಕಾಸಕ್ಕೆ ಶಾಲೆಯ ಬೆಳವಣಿಗೆಗೆ ನೆರವನ್ನು ನೀಡಿರುವವರಿಗೆ ಧನ್ಯವಾದ ಅರ್ಪಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸತೀಶ್, ಸುಂದರನ್, ಗ್ರಾಮ ಪಂಚಾಯ್ತಿ ಸದಸ್ಯರಾದ ಉಮಾ ಚನ್ನೇಗೌಡ, ನೇತ್ರಾವತಿ ಸಂಪತ್ ಕುಮಾರ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಗ್ರಾಮಸ್ಥರಾದ ಜಯರಾಮ್, ಮನೋಜ್, ಪ್ರಭಾಕರ್, ಈಶ್ವರಾಚಾರಿ, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ ಪಾಷ, ಭಾರತಿ, ವೆಂಕಟಮ್ಮ, ಸಿಬ್ಬಂದಿ ಮುನಿರತ್ನಮ್ಮ, ಮಂಜುಳ, ಚನ್ನರಾಯಪ್ಪ ಹಾಜರಿದ್ದರು.