ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಬಿಜೆಪಿಯ ನೂತನ ನಗರ ಹಾಗೂ ಗ್ರಾಮಾಂತರ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರವಿದ್ದಾಗ ನಾವು ಏನೆಲ್ಲಾ ಕೆಲಸ ಕಾರ್ಯಗಳು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಎಲ್ಲರಿಗೂ ಉತ್ತಮ ಅವಕಾಶ ಸಿಗಲಿದ್ದು ಸಿಕ್ಕ ಅವಕಾಶಗಳನ್ನು ಜನರ ಹಾಗೂ ಪಕ್ಷದ ಏಳಿಗೆಗಾಗಿ ಬಳಸಿಕೊಳ್ಳಿ. ಪಕ್ಷವನ್ನು ಸಂಘಟಿಸಿ ಗಟ್ಟಿಗೊಳಿಸಿ ಎಂದರು.
ಶಿಡ್ಲಘಟ್ಟದ ಜನತೆಯ ಬಹುದಿನಗಳ ಬೇಡಿಕೆಯಾಗಿರುವಂತಹ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿದ್ದು ೪೦ ಕೋಟಿ ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ. ಕೋಲಾರ ಜಿಲ್ಲೆ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನರಿಗೆ ನೀರು ನೀಡುವ ಯೋಜನೆಗಳಾದ ಎತ್ತಿನಹೊಳೆ ಹಾಗೂ ಎಚ್.ಎನ್ ವ್ಯಾಲಿ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದರು.
ಕಳೆದ ೭೦ ವರ್ಷಗಳಿಂದ ದೇಶದ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಅಧಿಕಾರ ನಡೆಸಿ ಕಾಂಗ್ರೆಸ್ ಇದೀಗ ಪೌರತ್ವ ಕಾಯಿದೆಯ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಮುಸ್ಲೀಂ ಬಾಂದವರನ್ನು ಮೋಸ ಮಾಡುತ್ತಿದೆ. ಪೌರತ್ವ ಕಾಯಿದೆಯಿಂದ ದೇಶದಲ್ಲಿ ಹುಟ್ಟಿ ಬೆಳೆದ ಯಾವುದೇ ಧರ್ಮೀಯರಿಗೆ ತೊಂದರೆಯಾಗುವುದಿಲ್ಲ. ಪೌರತ್ವ ಕಾಯಿದೆಯಿಂದ ದೇಶದೊಳಕ್ಕೆ ಅಕ್ರಮವಾಗಿ ನುಸುಳಿ ದೇಶದಲ್ಲಿ ಆಶಾಂತಿ ಸೃಷ್ಟಿಸುವ ನುಸುಳುಕೋರರಿಗೆ ಮಾತ್ರ ತೊಂದರೆಯಾಗಲಿದೆ. ಈ ಬಗ್ಗೆ ಸುಳ್ಳು ವದಂತಿಗಳಿಗೆ ಮುಸ್ಲೀಂ ಬಾಂದವರು ಕಿವಿಗೊಡಬಾರದು ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮಂಡಲಾಧ್ಯಕ್ಷ ಬಿ.ಸಿ.ನಂದೀಶ್ ಅವರು ನೂತನ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ ಹಾಗೂ ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡರಿಗೆ ಪಕ್ಷದ ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಬಿಜೆಪಿ ತಾಲ್ಲೂಕು ಘಟದಕ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುರೇಶ್, ಶ್ರೀರಾಮರೆಡ್ಡಿ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಈಶ್ವರಾಚಾರಿ, ವೆಂಕಟೇಶ್‌ಗೌಡ, ಡಾ.ಸತ್ಯನಾರಾಯಣರಾವ್, ಮಹಿಳಾ ಘಟಕದ ಮಂಜುಳಮ್ಮ, ಸುಜಾತಮ್ಮ, ಮುನರತ್ನಮ್ಮ, ಮುಖೇಶ್, ಕೆಂಪರೆಡ್ಡಿ ಹಾಜರಿದ್ದರು.