Home News ಶಿಡ್ಲಘಟ್ಟದಲ್ಲಿ ವಿಶ್ವ ಯೋಗ ದಿನಾಚರಣೆ

ಶಿಡ್ಲಘಟ್ಟದಲ್ಲಿ ವಿಶ್ವ ಯೋಗ ದಿನಾಚರಣೆ

0

ಇಡೀ ವಿಶ್ವವೇ ಇಂದು ಒಂದು ಕುಟುಂಬದಂತೆ ಒಮ್ಮತದಿಂದ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧಗೊಳಿಸಲು, ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗದ ದಿನಾಚರಣೆ ನಡೆಸುತ್ತಿರುವುದಾಗಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಮುಂದೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ‘ವಿಶ್ವ ಯೋಗ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಯೋಗಾಸನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದ 193 ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ. ಒತ್ತಡ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮಾತನಾಡಿ,‘ಉತ್ತಮ ಆರೋಗ್ಯವಂತ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.
ನಗರದ ರೈಲ್ವೆ ನಿಲ್ದಾಣ, ಮಾರಮ್ಮ ವೃತ್ತ, ಕೋಟೆ ವೃತ್ತ, ಬಸ್ ನಿಲ್ದಾಣ, ಹೂ ವೃತ್ತಗಳ ಬಳಿ ಶಾಲಾ ವಿದ್ಯಾರ್ಥಿಗಳು ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ನಿಂತು ಮಾಡುವ ಆಸನಗಳಾದ ತಾಡಾಸನ, ಪಾದ ಹಸ್ತಾಸನ, ಚಕ್ರಾಸನ, ವೀರಭದ್ರಾಸನ, ವೃಕ್ಷಾಸನ, ತ್ರಿಕೋಣಾಸನ ಮುಂತಾದವುಗಳನ್ನು ಪ್ರದರ್ಶಿಸಿದರು. ಪ್ರತಿಯೊಂದು ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವಾಗ ಅವುಗಳಿಂದಾಗುವ ಉಪಯೋಗಗಳ ಬಗ್ಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಿವರಿಸಿದರು.
‘ಯೋಗದಿಂದ ರೋಗ ಮುಕ್ತ ಜೀವನ’, ‘ನಮ್ಮ ನಡಿಗೆ ಯೋಗದ ಕಡೆಗೆ’ ಎಂದು ಘೋಷಣೆಗಳನ್ನು ಕೂಗುತ್ತಾ ಶೋಭಾಯಾತ್ರೆಯನ್ನು ನಡೆಸಿದರು.
ಮೇಲೂರು

22jun2
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ಶಾಲಾ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಯೋಗಪಟು ಮಂಜುನಾಥ್ ಯೋಗಾಸನಗಳನ್ನು ಅದರ ಉಪಯುಕ್ತತೆಯನ್ನು ವಿವರಿಸುತ್ತಾ ಕಲಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಪ್ರಾಢಶಾಲೆ ಆವರಣದಲ್ಲಿ ಭಾನುವಾರ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಯೋಗಪಟು ಮಂಜುನಾಥ್ ಯೋಗಾಸನಗಳನ್ನು ಅದರ ಉಪಯುಕ್ತತೆಯನ್ನು ವಿವರಿಸುತ್ತಾ ಕಲಿಸಿದರು.
ಮಳ್ಳೂರು
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ನಾಗಲದೇವಿ ಭವನದಲ್ಲಿ ಭಾನುವಾರ ವಿಶ್ವ ಯೋಗದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಳ್ಳೂರು ಹರೀಶ್ ಸೂತ್ರನೇತಿಯನ್ನು ಪ್ರದರ್ಶಿಸಿದರು.

ತಾಲ್ಲೂಕಿನ ಮಳ್ಳೂರು ಗ್ರಾಮದ ನಾಗಲದೇವಿ ಭವನದಲ್ಲಿ ಭಾನುವಾರ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಗ್ರಾಮದ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ, ವಿವಿಧ ಆಸನಗಳು, ಕ್ರಿಯೆಗಳಾದ ಜಲನೇತಿ, ಸೂತ್ರನೇತಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಯೋಗದ ಪ್ರಯೋಜನಗಳು, ಏಕ್ಆಗ್ರತೆ, ಆಹಾರ ಪದ್ಧತಿಗಳ ಬಗ್ಗೆ ತಿಳಿಸಿಕೊಡಲಾಯಿತು.
ಪೊಲೀಸ್ ಅಧಿಕಾರಿ ರಮೇಶ್, ಮಳ್ಳೂರು ಹರೀಶ್, ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಅಶ್ವತ್ಥನಾರಾಯಣ್, ಯೋಗ ತರಬೇತುದಾರ ದೇವರಾಜ್, ಉಪನ್ಯಾಸಕ ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.