Home News ಶಿಡ್ಲಘಟ್ಟದಲ್ಲಿ ವೈಭವದಿಂದ ಬಸವ ಜಯಂತಿ ಆಚರಣೆ

ಶಿಡ್ಲಘಟ್ಟದಲ್ಲಿ ವೈಭವದಿಂದ ಬಸವ ಜಯಂತಿ ಆಚರಣೆ

0

ಬಸವಣ್ಣನವರು ಜೀವಿಸಿದ 12 ನೇ ಶತಮಾನದ ಕಾಲವನ್ನು ಪುನವಿರ್‌ಮರ್ಶೆ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ, ಜಾತಿ ಜಾತಿಗಳಲ್ಲಿನ ದ್ವೇಷಭಾವಗಳನ್ನು ತ್ಯಜಿಸಿ ಮಾನವಕುಲ ಒಂದಾಗಬೇಕಾಗಿದೆ. ಇಂದಿನ ಮಂತ್ರಿಗಳೂ ಕೂಡಾ ಬಸವಣ್ಣನವರ ಆಳ್ವಿಕೆಯ ದಿನಗಳಲ್ಲಿ ಆಡಳಿತ ನಡೆಸುತ್ತಿದ್ದ ವಿಧಾನಗಳು ಹಾಗೂ ಪ್ರಜೆಗಳ ಕೆಲಸಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿದ್ದ ಚಾಕಚಕ್ಯತೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ವಿಜಯಪುರ ಶಾಖಾ ಮಠದ ಮಹದೇವ ಸ್ವಾಮಿಜೀ ಆಶೀರ್ವಚನ ನೀಡಿ ಮಾತನಾಡಿದರು.
ಪಟ್ಟಣದ ಅರಳೇಪೇಟೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಬಸವೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ನಡೆದ ಕಲ್ಯಾಣ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮೂಢನಂಬಿಕೆ ಹಾಗು ಶೋಷಣೆಯನ್ನು ನಿವಾರಿಸಿ ಸಮಾನತೆ, ಸಹೋದರತೆ, ಕಾಯಕ, ದಾಸೋಹ ದಂತಹ ಉದಾತ್ತ ತತ್ವಗಳ ಮೂಲಕ ಸಮಾಜದ ಎಲ್ಲರ ಶ್ರೇಯಸ್ಸನ್ನು ಬಯಸಿದ ಮಹಾಮಾನವತಾವಾದಿ, ವಿಶ್ವಮಾನವ, ಜಗಜ್ಯೋತಿ ಬಸವೇಶ್ವರರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೇ ದೀನ ದಲಿತರ ಹಾಗು ದುರ್ಬಲರ ಏಳಿಗೆಗಾಗಿ ಹಾಗು ಮಹಿಳೆಯರಿಗೆ ಸಮಾನವಾದ ಹಕ್ಕು ನೀಡುವಲ್ಲಿ ಶ್ರಮಿಸಿದ್ದರು. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಇಡೀ ಜಗತ್ತೇ ಮಾರುಹೋಗಿದ್ದು ಅಂತಹ ಮಹಾಪುರುಷರ ಜಯಂತಿಯನ್ನು ಅವರ ನುಡಿಮುತ್ತಾದ ಕಾಯಕವೇ ಕೈಲಾಸ ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಎಲ್ಲಾ ವರ್ಗದವರು ಸೇರಿ ಆಚರಿಸುವಂತಾಗಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ವಾಗೀಶ್‌ಪ್ರಸಾದ್ ಮಾತನಾಡಿ ಬಸವಣ್ಣನವರು ಕಂಡಿದ್ದ ಕನಸನ್ನು ನನಸು ಮಾಡುವಂತಹ ಕೆಲಸವನ್ನು ಎಲ್ಲಾ ಜನಾಂಗಗಳು ಮಾಡಬೇಕು, ಜಾತಿಯ ಕಾಲಂಗಳನ್ನು ತೆಗೆದುಹಾಕಿದರೆ ಎಲ್ಲಾ ಜಾತಿ ಜನಾಂಗದವರು ಒಂದಾಗಲು ಸಾಧ್ಯವಿದೆ, ಯಾವುದೇ ಜಾತಿ, ಧರ್ಮ, ಮತವೆಂಬುದಾಗಿ ವಿಂಗಡನೆ ಮಾಡಬೇಡಿ, ನಾವೆಲ್ಲ ಮನುಷ್ಯರು ಎಂದಷ್ಟೆ ಭಾವಿಸಬೇಕಾಗಿದೆ, ಶಾಸಕರು ಎಲ್ಲಾ ಹಿಂದುಳಿದ ವರ್ಗಗಳ ಕೇರಿಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಹೆಚ್ಚಿನ ಅನುಧಾನಗಳನ್ನು ಮೀಸಲಿಟ್ಟು ಸುದಾರಣೆ ಮಾಡಲು ಸಹಕಾರ ನೀಡಬೇಕು. ಯುವಕರಲ್ಲಿ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ದುಂದುವೆಚ್ಚ ಮಾಡಿ ಮದುವೆ ಮಾಡಬೇಡಿ, ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ, ರಕ್ತದಾನ ಮಾಡಿ, ವರದಕ್ಷಿಣೆ ಪಿಡಗನ್ನು ತೊಲಗಿಸಿ ಅಂತರ್ಜಾತಿ ವಿವಾಹಗಳನ್ನು ಮಾಡಿಕೊಳ್ಳಬೇಕು, ಶತಶತಮಾನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಬಸವೇಶ್ವರರ ಹೆಸರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ, ಮತ್ತು ಅಕ್ಕಮಹಾದೇವಿಯ ಹೆಸರನ್ನು ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಾಲಿಂಗಯ್ಯ ಮಠದ್ ಅವರ ಅಂಧಕಲಾವಿದರ ತಂಡದಿಂದ ವಚನಗಾಯನವನ್ನು ಏರ್ಪಡಿಸಲಾಗಿತ್ತು.
ಸಂಜೆ ದೇವಾಲಯದಿಂದ ವಿದ್ಯುತ್‌ ದೀಪಾಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿರಿಸಿ ನಂದೀಧ್ವಜ ಸಮೇತ ರೇಣುಕಾರಾಧ್ಯ ಮತ್ತು ತಂಡದವರಿಂದ ವೀರಭದ್ರ ನೃತ್ಯ, ದಕ್ಷಬ್ರಹ್ಮನ ಸಂವಾದ, ಕರಡಿ ಮಜಲು, ಚಿಟ್ಟಿಮೇಳ, ನಾದಸ್ವರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಉಲ್ಲೂರುಪೇಟೆಯ ಜೋಡಿ ಬಸವೇಶ್ವರ ದೇಗುಲದಲ್ಲಿ ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ವಿಜಯಪುರ ಮಠದ ಮಹದೇವ ಸ್ವಾಮಿಜಿ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ್‌ಪ್ರಸಾದ್, ಡಾ.ಸತ್ಯನಾರಾಯಣರಾವ್, ಬಸವೇಶ್ವರ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಉಪಾಧ್ಯಕ್ಷ ಡಿ.ಜಿ.ಮಲ್ಲಿಕಾರ್ಜುನ, ಎಸ್.ಜಿ.ಚಂದ್ರಶೇಖರ್‌ಬಾಬು, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್‌ಬಾಬು, ಎಂ.ಎನ್,ನಾಗಭೂಷಣ್, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.