Home News ಶಿಡ್ಲಘಟ್ಟದಲ್ಲಿ 17 ವರ್ಷಗಳಿಂದ ಉಚಿತ ಯೋಗಶಿಕ್ಷಣ

ಶಿಡ್ಲಘಟ್ಟದಲ್ಲಿ 17 ವರ್ಷಗಳಿಂದ ಉಚಿತ ಯೋಗಶಿಕ್ಷಣ

0

‘ಜೂನ್ ೨೧’ ಅನ್ನು ಅಂತರಾಷ್ತ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆಯು ಘೋಷಿಸಿರುವುದರಿಂದ ಇಂದು ಎಲ್ಲೆಡೆ ‘ವಿಶ್ವ ಯೋಗದಿನಾಚರಣೆ’ ಆಚರಿಸಲಾಗುತ್ತಿದೆ. ‘ಯೋಗ ದಿನ’ ಆಚರಣೆಗೆ ಕಾರಣಕರ್ತರು ಯಾರು ಹಾಗೂ ಯೋಗದ ಅಗತ್ಯತೆಯ ಕುರಿತಂತೆ ಹಲವೆಡೆ ಚರ್ಚೆ ನಡೆದಿದೆ.
21jun3ಆದರೆ ಎಲೆ ಮರೆಯ ಕಾಯಿಯಂತೆ, ಸದ್ದಿಲ್ಲದೆ ಜಿನುಗುವ ನೀರ ಝರಿಯಂತೆ ಶಿಡ್ಲಘಟ್ಟದಲ್ಲಿ ಕಳೆದ 17 ವರ್ಷಗಳಿಂದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶಾಖೆಯು ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದೆ. 1998 ರ ಆಗಸ್ಟ್ 15 ರಂದು ಪ್ರಾರಂಭಗೊಂಡು ಇದುವರೆಗೂ 30ಕ್ಕೂ ಹೆಚ್ಚು ಉಚಿತ ಯೋಗ ಶಿಬಿರಗಳನ್ನು ನಡೆಸಿದೆ. ಪುರುಷರು ಮತ್ತು ಮಹಿಳೆಯರೂ ಸೇರಿದಂತೆ 2000 ಕ್ಕೂ ಹೆಚ್ಚು ಮಂದಿಗೆ ಯೋಗ ಶಿಕ್ಷಣ ನೀಡಲಾಗಿದೆ.
‘ಯೋಗೇನ ಚಿತ್ತಸ್ಯ ಪದೇನವಾಚಾಂ, ಮಲಂ ಶರೀರಸ್ಯ ಚ ವೈದ್ಯಕೇನ’ ಎಂಬಂತೆ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧಗೊಳಿಸಲು, ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗವು ಪರಿಹಾರ ಎನ್ನುತ್ತಾ ಉಚಿತವಾಗಿ ಯೋಗ ಶಿಕ್ಷಣ ಜಾರಿಯಲ್ಲಿದೆ.
‘ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಲ್ಲವೂ ಸೇರಿದಾಗ ಅಷ್ಟಾಂಗ ಯೋಗವಾಗುತ್ತದೆ. ‘ಆಸನ’ವನ್ನೇ ಅನೇಕರು ಯೋಗ ಎನ್ನುತ್ತಾರೆ. ಆಸನಗಳು ಯೋಗದ ಒಂದು ಭಾಗವಷ್ಟೆ. ಯೋಗವೆನ್ನುವುದು ಬರೀ ಆಸನ ಪ್ರಾಣಾಯಾಮಗಳ ವ್ಯಾಯಾಮವಲ್ಲ. ಅದೊಂದು ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ನಡುವಿನ ಸಮನ್ವಯ ಸಾಧನ. ಈ ಉದ್ದೇಶದಿಂದ ನಮ್ಮ ಪತಂಜಲಿ ಯೋಗ ಶಿಕ್ಷಣದಲ್ಲಿ ಕೇವಲ ಆಸನಗಳಷ್ಟೇ ಅಲ್ಲದೆ ಅಷ್ಟಾಂಗ ಯೋಗದ ಶಿಕ್ಷಣವನ್ನು ನೀಡಲಾಗುತ್ತಿದೆ. ಮಾತೃಭೋಜನ, ಸತ್ಸಂಗ, ಚಾಂದನಿ ಕಾರ್ಯಕ್ರಮ, ಭಾರತಮಾತಾ ಪೂಜೆ, ಭಜನೆ ಮುಂತಾದ ದೇಹ, ಮನಸ್ಸು, ಬುದ್ಧಿಗಳನ್ನು ಸರಿದಾರಿಯತ್ತ ತರುವ ಕಾರ್ಯಕ್ರಮಗಳೂ ಇದರ ಭಾಗವಾಗಿದೆ’ ಎನ್ನುತ್ತಾರೆ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್.
‘ತಾಲ್ಲೂಕಿನಲ್ಲಿ ಹಲವಾರು ಶಾಲೆಗಳಲ್ಲಿ ಉಚಿತ ಯೋಗಶಿಕ್ಷಣ, ರಕ್ತದಾನ ಶಿಬಿರ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ, ನೇಪಾಳ ಭೂಕಂಪ, ಕಾಶ್ಮೀರ, ಗುಜರಾತ್ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಯೋಗಬಂಧುಗಳು ಪಾಲ್ಗೊಂಡಿದ್ದೇವೆ. ಈಗಾಗಲೇ ಯೋಗಬಂಧುಗಳ ಸಹಕಾರದಿಂದ ನಿವೇಶನವನ್ನು ಖರೀದಿಸಿದ್ದು, ಮುಂದೆ ಯೋಗಮಂದಿರವನ್ನು ನಿರ್ಮಾಣ ಮಾಡಿ ಹೆಚ್ಚೆಚ್ಚೆ ಮಂದಿಗೆ ಯೋಗ ಶಿಕ್ಷಣ ನೀಡುವ ಗುರಿಯಿದೆ’ ಎಂದು ಅವರು ವಿವರಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.