Home News ಶಿಡ್ಲಘಟ್ಟದ ಮುಂಜಾನೆಯ ಮಂಜು

ಶಿಡ್ಲಘಟ್ಟದ ಮುಂಜಾನೆಯ ಮಂಜು

0

ಮುಂಜಾನೆಯ ಮಂಜು..
ಬೆಳಗಿನ ಚುಮು ಚುಮು ಚಳಿ..
ಹಸಿರು ಹುಲ್ಲು ಹಾಸಿನ ಮೇಲೆ ಇಬ್ಬನಿಯ ಹನಿಗಳು..
ಶಿಡ್ಲಘಟ್ಟದಲ್ಲಿ ಗುರುವಾರದ ಮುಂಜಾವು ಸದ್ದಿಲ್ಲದೆ ಮಂಜಿನಲ್ಲಿ ಮೀಯುತ್ತಿತ್ತು. ಡಿಸೆಂಬರಿನ ಕೊರೆಯುವ ಚಳಿ ಹೊಸ್ತಿಲಲ್ಲೇ ಇದೆ ಎಂಬುದನ್ನು ನೆನಪಿಸುವ ರೀತಿಯಲ್ಲಿ ತಾಲ್ಲೂಕಿನಲ್ಲಿ ದಟ್ಟ ಹಿಮವು ಆವರಿಸಿತ್ತು. ಬೆಳಿಗ್ಗೆ ಎಂಟು ಗಂಟೆಯದರೂ ರಸ್ತೆಗಳಲ್ಲಿ ವಾಹನಗಳು ದೀಪ ಉರಿಸುತ್ತಲೇ ಸಂಚರಿಸಬೇಕಾಯಿತು.
ಬೆಳಿಗ್ಗೆ ನಿದ್ದೆಯಿಂದೆದ್ದು ಹೊರಗೆ ಬಂದವರಿಗೆ ಮತ್ತೊಂದು ಬಿಳಿಯ ಕನಸಿನ ಲೋಕ ಕಣ್ಮುಂದೆ ತೆರೆದುಗೊಂಡಿತ್ತು. ಅದು ಕನಸಲ್ಲ, ಉದ್ದಕ್ಕೂ ಹಬ್ಬಿದ ಇಬ್ಬನಿಯ ಇಹದ ಲೋಕ ಎಂದು ತಿಳಿಯಲು ಕೆಲ ಕ್ಷಣಗಳು ಬೇಕಾದವು. ಹೀಗೆ ಚಳಿಗಾಲದ ಪ್ರಾರಂಭವು ಹೊಸ ಬಗೆಯಲ್ಲಿ ಆರಂಭಗೊಂಡಿತು.
ವಾಹನಗಳಲ್ಲಿ ಸಂಚರಿಸುತ್ತಿದ್ದವರ ತಲೆಕೂದಲು ಹಾಗೂ ಮುಖದ ಮೇಲೆಲ್ಲಾ ಮಂಜಿನ ಹನಿಗಳು ಮೂಡಿದ್ದರೆ, ದಾರಿಯುದ್ದಕ್ಕೂ ಬೆಳೆದ ಹುಲ್ಲು, ಗರಿಕೆ, ವನಕುಸುಮಗಳ ಮೇಲೆ ಇಬ್ಬನಿಯು ಮುತ್ತುಗಳಂತೆ ಕಂಗೊಳಿಸುತ್ತಿದ್ದವು. ಗಿಡಗಂಟೆಗಳ ಮೇಲೆ ಹಬ್ಬಿದ ಜೇಡರ ಬಲೆಗಳ ಮೇಲೂ ಮಂಜಿನ ಹನಿಗಳು ಮಣಿಗಳಂತೆ ಮೂಡಿ ಕಿರು ಬಿಸಿಲಿಗೆ ಹೊಳೆಯುತ್ತಿದ್ದವು.
ಎಲ್ಲವೂ ಇಬ್ಬನಿಯ ಹಾಸಿಗೆಯಲ್ಲಿ ಮಲಗಿ ನಿದ್ದೆ ಹೋದಂತೆ ಇತ್ತು. ಎಲ್ಲವೂ ಇದ್ದರೂ ಕಾಣದಂತಿತ್ತು. ದಾರಿಬದಿಯ ಮರಗಳಿಂದ ಇಬ್ಬನಿಯ ತುಂತುರಿನ ಸೋನೆ ಮಳೆಯೂ ಜಿನುಗುತ್ತಿತ್ತು. ಬೆಳಿಗ್ಗೆ ಒಂಬತ್ತರ ವೇಳೆಗೆ ಹೊರ ಬಂದರೂ ಸೂರ್ಯ ಮಂಜಿನ ಮರೆಯಲ್ಲಿ ಚಂದ್ರನಂತೆ ಹೊಳೆಯುತ್ತಿದ್ದ.
ಕಾಲಕ್ಕೆ ತಕ್ಕಂತೆ ವ್ಯಾಪಾರ ಮಾಡುವ ತಳ್ಳು ಗಾಡಿಗಳವರು ಚಳಿಗಾಲದ ಟೊಪ್ಪಿ, ಮಫ್ಲರ್ ಮುಂತಾದ ಉಡುಪುಗಲ ಮಾರಾಟದಲ್ಲಿ ತೊಡಗಿದ್ದರು. ಬೆಳಿಗ್ಗೆ ನಿತ್ಯ ಕಾಯಕದಲ್ಲಿ ನಿರತರಾಗುವ ಕಟ್ಟಡ ಕಾರ್ಮಿಕರು ಬೆಚ್ಚನೆಯ ಉಡುಪುಗಳ ಚೌಕಾಸಿಯಲ್ಲಿ ನಿರತರಾಗಿದ್ದರು.
ಮುಂಜಾನೆಯ ಕೆಲಸದಲ್ಲಿ ತೊಡಗಿಕೊಳ್ಳುವ ಹಾಲು, ಹೂ, ತರಕಾರಿ ಮತ್ತು ಪತ್ರಿಕೆ ವಿತರಕರು ಚಳಿಗೆ ನಡುಗುತ್ತಾ ತಮ್ಮ ಕೆಲಸ ಮಾಡಿದರೆ, ಬೆಳಗಿನ ವಾರ್ತಾ ಪತ್ರಿಕೆ ಓದುತ್ತಾ ಬಿಸಿ ಚಹಾ ಅಥವಾ ಕಾಫಿ ಸೇವಿಸುತ್ತಾ ಹಲವರು ಚಳಿಯ ಸುಖಾನುಭವವನ್ನು ಸವಿದರು.
 
[images title=”ಮುಂಜಾನೆಯ ಮಂಜು” cols=”four” auto_slide=”true” lightbox=”true”]
[image link=”2253″ image=”2253″]
[image link=”2255″ image=”2255″]
[image link=”2254″ image=”2254″]
[image link=”2256″ image=”2256″]
[/images]