Home News ಶಿಡ್ಲಘಟ್ಟದ ಮೂವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಶಿಡ್ಲಘಟ್ಟದ ಮೂವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರಿಗೆ ಈ ಬಾರಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಲುವರಾತಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ವಿ.ಪ್ರಭಾಕರ್, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ನಾಗಭೂಷಣ್ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಸುಗಟೂರು ಸರ್ಕಾರಿ ಶಾಲೆಯ ಶಿಕ್ಷಕ ರುದ್ರೇಶಮೂರ್ತಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಕ ಎಸ್.ವಿ.ಪ್ರಭಾಕರ್

ಸುಮಾರು ೨೭ ವರ್ಷಗಳ ಕಾಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಸ್.ವಿ.ಪ್ರಭಾಕರ್ ಅವರು ಸೇವೆಗೆ ಸೇರಿದ್ದು ೧೯೯೨ ರ ಆಗಸ್ಟ್ ೨೭ ರಂದು. ಉಪ್ಪುಕುಂಟಹಳ್ಳಿ ಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಅಲ್ಲಿ ಶಾಲೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆದು ತಂದು ಸೇರಿಸಿಕೊಂಡು ಸಂಖ್ಯೆ ಹೆಚ್ಚಿಸಿ, ಸಮುದಾಯದ ಸಹಕಾರದೊಂದಿಗೆ ಶಾಲೆಗೆ ನಾಲ್ಕು ನಿವೇಶನಗಳನ್ನು ಖರೀದಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಶಾಲೆಗೆ ಕಾಂಪೌಂಡ್, ಕುಡೀಯುವ ನೀರು, ಪೀಠೋಪಕರಣ, ಶಾಲಾ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸುವುದು ಮುಂತಾದ ಕೆಲಸಗಳನ್ನು ಮಾಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ವಿವಿಧ ರೀತಿಯ ತರಬೇತಿಗಳನ್ನು ಪಡೆದಿರುವ ಇವರು ನಿಲುವರಾತಹಳ್ಳಿಯ ಶಾಲೆಯಲ್ಲಿ ೨೦೦೨ ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ಸ್ಥಳವೇ ಇಲ್ಲದ ಶಾಲೆಗೆ ಸಮುದಾಯ, ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯಿತಿಯ ನೆರವು ಪಡೆದು ಎರಡು ಎಕರೆಗೂ ಹೆಚ್ಚಿನ ಸ್ಥಳವನ್ನು ದಾನವಾಗಿ ಪಡೆದು ಅಲ್ಲಿ ೩೦ ಕ್ಕೂ ಹೆಚ್ಚು ವಿಧದ ಒಂದು ಸಾವಿರಕ್ಕೂ ಅಧಿಕ ಮರಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೀರಿನ ವ್ಯವಸ್ಥೆ, ಚಿಣ್ಣರ ವೇದಿಕೆ, ಧ್ವಜಸ್ತಂಭ, ಪೀಠೋಪಕರಣಗಳನ್ನು ಸಮುದಾಯದ ನೆರವಿನೊಂದಿಗೆ ಶಾಲೆಗೆ ಮಾಡಿಸಿದ್ದಾರೆ. ಕೂಲಿಗಾಗಿ ತೋಟಗಳಿಗೆ ವಲಸೆ ಬಂದ ಕುಟುಂಬಗಳ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಓದಿಸಿ ವಿದ್ಯಾವಂತರಾಗುವಂತೆ ಮಾಡಿದ್ದಾರೆ.
“ಗಿಡ ಮತ್ತು ಮಕ್ಕಳೆಂದರೆ ನನಗೆ ಪಂಚಪ್ರಾಣ. ಶಾಲೆಯನ್ನು ಅಭಿವೃದ್ಧಿ ಮಾಡಲು ಗ್ರಾಮಸ್ಥರು ಸದಾ ನೆರವು ನೀಡುತ್ತಾರೆ. ಪ್ರಶಸ್ತಿ ಬಂದಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ಶಿಕ್ಷಕ ಎಸ್.ವಿ.ಪ್ರಭಾಕರ್ ತಿಳಿಸಿದರು.

ಶಿಕ್ಷಕ ಎಲ್.ನಾಗಭೂಷಣ್

ಸುಮಾರು ೨೩ ವರ್ಷಗಳ ಕಾಲ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಲ್.ನಾಗಭೂಷಣ್ ಅವರು ಸೇವೆಗೆ ಸೇರಿದ್ದು ೧೯೯೬ ರ ನವೆಂಬರ್ ೧೪ ರ ಮಕ್ಕಳ ದಿನಾಚರಣೆಯಂದು. ಗೌರಿಬಿದನೂರಿನ ದೇವರಹಳ್ಳಿ ಮತ್ತು ಕೇಶವಪುರದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಕಳೆದ ೧೭ ವರ್ಷಗಳಿಂದ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮುದಾಯದ ಸಹಕಾರದೊಂದಿಗೆ ಶಾಲೆಯ ಮೈದಾನವನ್ನು ಉಳಿಸಿಕೊಂಡು ಕಾಂಪೌಂಡ್ ಹಾಕಿಸಿದ್ದಲ್ಲದೆ, ಸುಮಾರು ೧೫೦ ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ವಿದ್ಯಾರ್ಥಿಗಳ ಜೊತೆಗೂಡಿ ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಶಾಲೆಯ ಆವರಣದಲ್ಲಿಯೇ ಬೆಳೆಯುವರು. ಶಾಲೆಯ ಇಬ್ಬರು ಹೆಣ್ಣುಮಕ್ಕಳ ಸಾಹಸವನ್ನು ಗುರುತಿಸಿ ಬೆಳಕಿಗೆ ತಂದು ಅವರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಪ್ರತಿವರ್ಷ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ನಂತರ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸುತ್ತಾರೆ. ಹೊರಸಂಚಾರವಾಗಿ ವಿದ್ಯಾರ್ಥಿಗಳನ್ನು ವಿಧಾನಸೌಧಕ್ಕೆ ಕರೆದೊಯ್ಯುವ ಇವರು, ಪ್ರತೀ ವರ್ಷ ಶೈಕ್ಷಣಿಕ ಪ್ರವಾಸಕ್ಕೆ ರಾಜ್ಯದ ವಿವಿದೆಡೆ ಮಕ್ಕಳನ್ನು ಕರೆದುಕೊಂಡು ಹೋಗಿಬರುವರು. ಬೇಸಿಗೆಯಲ್ಲಿ ಅಳಿಲುಗಳು ಹಾಗೂ ಹಕ್ಕಿಗಳಿಗೆ ನೀರಿಡುವುದು, ಸಂಜೆ ವೇಳೆ ಮನೆಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಪಾಠವನ್ನು ಉಚಿತವಾಗಿ ಹೇಳಿಕೊಡುತ್ತಾರೆ.
“ಈ ಪ್ರಶಸ್ತಿ ನನಗಲ್ಲ. ನನ್ನ ಶಾಲೆಗೆ ಸೇರಿದ್ದು. ಈ ಪ್ರಶಸ್ತಿಯ ಮೂಲಕ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯನ್ನು ಗುರುತಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ವಿನೀತರಾಗಿ ಶಿಕ್ಷಕ ಎಲ್.ನಾಗಭೂಷಣ್ ಹೇಳಿದರು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ

ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಎಚ್.ಎಸ್.ರುದ್ರೇಶಮೂರ್ತಿ ಅವರು ಗ್ರಾಮೀಣ ಭಾಗದ ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಶ್ರಮವಹಿಸಿದ್ದು, ವೈಜ್ಞಾನಿಕ ಮತ್ತು ಮನೋವೈಜ್ಞಾನಿಕವಾಗಿ, ಶಿಶುಕೇಂದ್ರಿತ ಚಟುವಟಿಕೆ ಆಧಾರಿತವಾಗಿ ಬೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳನ್ನು ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಸರಾ ರಜಾ ಅವಧಿಯಲ್ಲಿ ವಿಶೇಷ ತರಬೇತಿ ನೀಡಿ ಪ್ರತಿವರ್ಷವೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಮಕ್ಕಳು ಆಯ್ಕೆಯಾಗಲು ಶ್ರಮಿಸುತ್ತಿದ್ದಾರೆ. ಇಲಾಖೆಯು ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಸೇವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿಗಳಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಸಂಗೀತ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಕಲೆಯಲ್ಲಿ ನಿರಂತರವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ಅನೇಕರನ್ನು ಕರೆಸಿ ಆಗಿಂದಾಗ್ಗೆ ಉಪನ್ಯಾಸ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ ಸಹಕಾರ ಪಡೆದು ಶಿಕ್ಷಣಕ್ಕೆ ಪೂರಕವಾದ ಶೈಕ್ಷಣಿಕ, ಭೌತಿಕ ಸವಲತ್ತುಗಳನ್ನು ಒದಗಿಸಿ ಉತ್ತಮ ಶಾಲಾಪರಿಸರವನ್ನು ಸೃಷ್ಟಿಸಿದ್ದಾರೆ. ಅನೇಕ ಸಮಾಜಸೇವಾಸಂಸ್ಥೆಗಳ ಸಹಕಾರ ಪಡೆದು ನಿರಂತರವಾಗಿ ಮಕ್ಕಳೀಗೆ ಅಗತ್ಯವಾದ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ಪ್ರತಿವರ್ಷವೂ ಕೊಡಿಸುತ್ತಿದ್ದಾರೆ. ಶಾಲೆಬಿಟ್ಟಮಕ್ಕಳನ್ನು ಗುರ್ತಿಸಿ ದಾಖಲಿಸಿಕೊಂಡು ಶಿಕ್ಷಣ ಕೊಡಿಸುತ್ತಿದ್ದಾರೆ.
“ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಮುಂದೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡೀದೆ” ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

error: Content is protected !!