Home News ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ‘ಕೃಷಿ ಪಂಡಿತ’ ಪ್ರಶಸ್ತಿ

ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ‘ಕೃಷಿ ಪಂಡಿತ’ ಪ್ರಶಸ್ತಿ

0

ಕೃಷಿ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ನೀಡುವ ‘ಕೃಷಿ ಪಂಡಿತ’ ಪ್ರಶಸ್ತಿಯು ತಾಲ್ಲೂಕಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರಿಗೆ ಲಭಿಸಿದೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಮತ್ತು 25 ಸಾವಿರ ರೂಗಳ ಚೆಕ್‌ಅನ್ನು ಅವರು ಸ್ವೀಕರಿಸಿದ್ದಾರೆ.
2013–14ನೇ ಸಾಲಿನ ‘ಕೃಷಿ ಪಂಡಿತ’ ಪ್ರಶಸ್ತಿಯನ್ನು ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿದ್ಧೀಕರಣ ವಿಭಾಗದಲ್ಲಿ ಆಂಜಿನಪ್ಪ ಅವರಿಗೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ರೈತರಿಗೆ ಈವರೆಗೆ ‘ಕೃಷಿ ಪಂಡಿತ’ ಪ್ರಶಸ್ತಿಯು ಲಭಿಸಿದ್ದು, ಅವರಲ್ಲಿ ಶಿಡ್ಲಘಟ್ಟ ತಾಲ್ಲೂಕನವರು ಮೂವರು ರೈತರಿದ್ದಾರೆ. ತಾಲ್ಲೂಕಿನ ಆನೂರಿನ ವೀರಕೆಂಪಣ್ಣ ಮತ್ತು ಹಿತ್ತಲಹಳ್ಳಿಯ ಎಚ್‌.ಜಿ.ಗೋಪಾಲಗೌಡ ಈವರೆಗೆ ಕೃಷಿ ಪಂಡಿತರಾಗಿದ್ದು, ಈಗ ಅವರೊಂದಿಗೆ ಘಟಮಾರನಹಳ್ಳಿಯ ರೈತ ಜಿ.ಬಿ.ಆಂಜಿನಪ್ಪ ಸೇರಿದ್ದಾರೆ.
ರೇಷ್ಮೆ, ರಾಗಿ, ತೊಗರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ, ಹೈನುಗಾರಿಕೆಯನ್ನೂ ಸಹ ಹೊಂದಿರುವ 62 ವರ್ಷ ವಯಸ್ಸಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರು ಓದಿರುವುದು ದ್ವಿತೀಯ ಪಿಯುಸಿ. ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ವಿಜಯಪುರದ ಜ್ಯೂಮಿಯರ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿ ನಂತರ ಕೃಷಿಯಲ್ಲಿ ತೊಡಗಿಸಿಕೊಂಡರು. ಇವರು ತಮ್ಮ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಸಮಗ್ರ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ‘ಕೃಷಿ ಪಂಡಿತ’ ಪ್ರಶಸ್ತಿಯು ಲಭಿಸಿರುವುದು ರೈತವಲಯದಲ್ಲಿ ಉತ್ತೇಜಕರ ಸಂಗತಿಯಾಗಿದೆ.