Home News ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೩೫೦೦ ಗೋಡಂಬಿ ಗಿಡಗಳ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೩೫೦೦ ಗೋಡಂಬಿ ಗಿಡಗಳ ವಿತರಣೆ

0

ಗೋಡಂಬಿಯಿಂದ ರೈತರಿಗೆ ಉತ್ತಮ ಆದಾಯ ಬರುತ್ತದೆ. ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗೆ 3,500 ಗೋಡಂಬಿ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದ ರೈತ ರಘುರೆಡ್ಡಿ ಅವರ ತೋಟದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 62 ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆಯನ್ನು ಬೆಳೆಯುವಷ್ಟು ಗಿಡಗಳನ್ನು ನೀಡುವ ಉದ್ದೇಶವಿದೆ. ಗಿಡಗಳನ್ನು ಸಮರ್ಪಕವಾಗಿ ನೆಟ್ಟು ಪೋಷಿಸಿದಲ್ಲಿ ಮುಂದಿನ ದಿನಗಳಲ್ಲಿ ಅವು ಆರ್ಥಿಕ ಮೂಲಗಳಾಗುತ್ತವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ ರೈತರಿಗೆ, ರೈತ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾಧಾಕೃಷ್ಣರಾವ್‌ ಗೋಡಂಬಿ ನಾಟಿ ವಿಧಾನ, ನಿರ್ವಹಣೆ, ಗೊಬ್ಬರ ಬಳಕೆ ಬಗ್ಗೆ ವಿವರಿಸಿದರು.
ತಾಲ್ಲೂಕು ಯೋಜನಾಧಿಕಾರಿ ಮೋಹನ್‌, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ರಾಘವೇಂದ್ರ, ಕೃಷಿ ಮೇಲ್ವಿಚಾರಕ ಜನಾರ್ಧನ್‌, ವಲಯದ ಮೇಲ್ವಿಚಾರಕ ಶಶಿಕುಮಾರ್‌, ಗ್ರಾಮ ಪಂಚಾಯ್ತಿ ಸದಸ್ಯೆ ಗೌರಮ್ಮ, ಒಕ್ಕೂಟ ಪದಾಧಿಕಾರಿ ಶಶಿಕಲಾ ಹಾಗೂ ಪ್ರಗತಿಪರ ರೈತರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.