ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ನಡೆಸಿದ ಕೊಡಗು ಸಂತ್ರಸ್ತರಿಗೆ ನೆರವಾಗಲು ಹಣ ಸಂಗ್ರಹಣೆಯ ಕಾರ್ಯಕ್ಕೆ ಚಾಲನೆ ನೀಡಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಸತತವಾಗಿ ಸುರಿದ ಮಹಾಮಳೆಯಿಂದಾಗಿ ಕೊಡಗು ತತ್ತರಿಸಿದೆ. ಅಲ್ಲಿನ ಜನರು ಮನೆ, ಜಮೀನು, ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರ ಕಷ್ಟಕ್ಕೆ ಸ್ವಲ್ಪವಾದರೂ ನೆರವಾಗಲು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮುಂದಾಗಿದೆ ಎಂದು ಅವರು ತಿಳಿಸಿದರು.
ಕಸಾಪ ಕೇವಲ ಭಾಷೆಯಷ್ಟೇ ಅಲ್ಲದೆ ಜನರ ಬದುಕಿಗೂ ಸ್ಪಂದಿಸುತ್ತದೆ. ನಮ್ಮ ಕನ್ನಡಿಗರು ಕಷ್ಟದಲ್ಲಿರುವಾಗ ನಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿ ಅವರಿಗೆ ನೆರವಾಗೋಣ, ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಕೈಜೋಡಿಸಿದಾಗ ಸಹಾಯದ ಹಸ್ತ ದೊಡ್ಡದಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಣ ಸಂಗ್ರಹಣೆಯ ನಂತರ ಮಾತನಾಡಿ, ಚಿಕ್ಕ ಚಿಕ್ಕ ಗೂಡಂಗಡಿಗಳವರು, ದಿನಗೂಲಿ ಮಾಡುವವರು, ಅಂಗವಿಕಲರು, ಮಹಿಳೆಯರು, ಮಸೀದಿಯಲ್ಲಿನ ಮುಸ್ಲೀಮರು ಉದಾರ ಮನಸ್ಸಿನಿಂದ ಹಣ ನೀಡಿದರು. ಸುಮಾರು ಮುವ್ವತ್ತು ಸಾವಿರ ರೂಗಳಷ್ಟು ಹಣ ಸಂಗ್ರಹವಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ನಂಜುಂಡಪ್ಪ, ಆರ್‌ಡಿಎಸ್ ನಾರಾಯಣಸ್ವಾಮಿ, ಶಶಿಕುಮಾರ್, ರಾಮಚಂದ್ರ, ಆನಂದ್, ರಘು, ಅಶೋಕ್, ಪ್ರದೀಪ್, ನರಸಿಂಹಮೂರ್ತಿ, ಮುನಿರಾಜು, ದೇವರಾಜು, ಮುನಿರಾಜು ಕುಟ್ಟಿ, ಸುಂದರಾಚಾರಿ, ನರಸಿಂಹಪ್ಪ ಹಾಜರಿದ್ದರು.