16.1 C
Sidlaghatta
Monday, December 8, 2025

ಶಿಡ್ಲಘಟ್ಟ ರೇಷ್ಮೆ ಪ್ರವಾಸೋಧ್ಯಮ ಮಾಡುವ ಉದ್ದೇಶ – ಜಿಲ್ಲಾಧಿಕಾರಿ ಅನಿರುದ್ ಶ್ರವಣ್

- Advertisement -
- Advertisement -

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರು ರೀಲರುಗಳು ಅಧಿಕಾರಿಗಳಿಗೆ ಸಹಕರಿಸಿ ಹೊಸ ಸಾಂಘಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. “ಕಾವಲು ಸಮಿತಿ” ರೀತಿಯ ಸಮಿತಿಯೊಂದನ್ನು ರಚಿಸಿಕೊಂಡು ನಿಮ್ಮೆಲ್ಲರ ಮಾರುಕಟ್ಟೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರಿಗೆ ರೈತರು ಮತ್ತು ರೀಲರುಗಳು ತಮ್ಮ ಸಮಸ್ಯೆಗಳನ್ನು ವಿವರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ರೈತರ ಈಗಿನ ಪ್ರಮುಖ ಸಮಸ್ಯೆ ರೇಷ್ಮೆ ಗೂಡಿನ ಬೆಲೆ ಕುಸಿತ. “ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಕುಸಿತವನ್ನು ತಡೆಗಟ್ಟಬೇಕು, ಪ್ರೋತ್ಸಾಹ ಧನ ನೀಡಬೇಕು” ಎಂದು ರೈತರು ಕೋರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಬೆಲೆ ಕುಸಿತ ಎಂದಿನಿಂದಾಗುತ್ತಿದೆ, ಎಷ್ಟು ರೇಷ್ಮೆ ಗೂಡು ಬರುತ್ತಿದೆ, ರೇಷ್ಮೆಯ ಬೆಲೆ ಎಷ್ಟಿದೆ, ಮುಂತಾದ ಅಂಕಿ ಸಂಖ್ಯೆಗಳ ಸಂಪೂರ್ಣವಾದ ವರದಿಯೊಂದನ್ನು ಸಿದ್ಧಪಡಿಸಿ ಆದಷ್ಟು ಬೇಗ ಕೊಡಬೇಕೆಂದು ಸೂಚಿಸಿದ್ದೇನೆ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ. ರೈತರು ಮತ್ತು ರೀಲರುಗಳ ಜೊತೆ ರೇಷ್ಮೆ ಅಧಿಕಾರಿಗಳು ಹದಿನೈದು ದಿನಗಳೊಳಗೆ ಸಭೆ ನಡೆಸಿ ಕುಂದುಕೊರತೆಗಳ ಪಟ್ಟಿ ಮಾಡಿ ನೀಡಬೇಕು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎನ್ನುತ್ತೀರಿ. ನಮ್ಮ ಡಿ.ಎಂ.ಎಫ್.ಡಿ ಫಂಡ್ ನಿಂದ ಹಣವನ್ನು ಕೊಡುತ್ತೇನೆ. ಅವಶ್ಯವಿರುವ ಸಿಬ್ಬಂದಿಯ ಬಗ್ಗೆ ಮಾಹಿತಿ ನೀಡಿ, ಸಿಬ್ಬಂದಿ ಹೆಚ್ಚಿಸಿಕೊಳ್ಳಿ ಎಂದು ರೇಷ್ಮೆ ಅಧಿಕಾರಿಗಳಿಗೆ ತಿಳಿಸಿದರು.
ಶಿಡ್ಲಘಟ್ಟ ರೇಷ್ಮೆ ಪ್ರವಾಸೋಧ್ಯಮ ಮಾಡುವ ಉದ್ದೇಶದಿಂದ ಸ್ವಲ್ಪ ಹಣವನ್ನು ತೆಗೆದಿರಿಸಿದ್ದೇನೆ. ನಿಮ್ಮ ಸಹಕಾರ ಅಗತ್ಯವಿದೆ. ಅದರ ಮೂಲಕ ಈ ಉದ್ದಿಮೆಯನ್ನು ಇನ್ನಷ್ಟು ಬಲಪಡಿಸಬಹುದಾಗಿದೆ. ಚಿಕ್ಕಬಳ್ಳಾಪುರದಲ್ಲಿಯೇ ಒಂದು ಸಭೆಯನ್ನು ಮಾಡುತ್ತೇನೆ. ರೇಷ್ಮೆಗೆ ಸಂಬಂಧಿಸಿದ ಅಧಿಕಾರಿಗಳು, ರೈತರು, ರೀಲರುಗಳು ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾ, ಅಭಿವೃದ್ಧಿ, ಪ್ರವಾಸೋಧ್ಯಮ ಹಾಗೂ ವಿವಿಧ ಆಯಾಮಗಳಲ್ಲಿ ಈ ಉದ್ದಿಮೆಯ ಬೆಳವಣಿಗೆಗೆ ಚರ್ಚಿಸೋಣ, ಕಾರ್ಯಗತಗೊಳಿಸೋಣ ಎಂದರು.
ರೇಷ್ಮೆ ಪ್ರವಾಸೋದ್ಯಮದ ಅಭಿವೃದ್ಧಿಗೆ ರೀಲರ್ ಕಾಲೋನಿ ಮಾಡಿ. ಅದರಲ್ಲಿ ಚಿಟ್ಟೆಯಿಂದ ಬಟ್ಟೆಯವರೆಗೂ ಎಲ್ಲ ರೇಷ್ಮೆಯ ವಿವಿಧ ಹಂತಗಳ ವ್ಯವಸ್ಥೆಯಿರಲಿ. ಪ್ರವಾಸಿಗರಿಗೆ ಕೊಳ್ಳಲು ಮರುಕಟ್ಟೆಯನ್ನು ರೂಪಿಸಿದರೆ ಚೆನ್ನ ಎಂಬ ಇಂಗಿತವನ್ನು ರೀಲರೊಬ್ಬರು ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೇಷ್ಮೆ ಗೂಡಿನ ಧಾರಣೆ ಒಂದು ಕೆ.ಜಿಗೆ ೪೫೦ ರೂಗಳಿಂದ ೨೮೦ ರೂಗಳಿಗೆ ಕುಸಿತ ಕಂಡಿದೆ. ರೇಷ್ಮೆ ಗೂಡು ಉತ್ಪಾದನಾ ವೆಚ್ಚವೂ ರಯ್ತನಿಗೆ ಸಿಗದ ಪರಿಸ್ಥಿತಿ ಮೂಡಿದೆ. ಈ ಹಿಂದೆ ೨೦೧೪ – ೧೫ ರಲ್ಲಿ ಇದೇ ರೀತಿ ಧಾರಣೆ ಕುಸಿದಾಗ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರಿಗೆ ಪ್ರೋತ್ಸಾಹ ಧನವನ್ನು ನೀಡಿದ್ದರಿಂದ ಇದನ್ನು ಅವಲಂಬಿತರು ಚೇತರಿಸಿಕೊಂಡಿದ್ದರು. ಈಗಲೂ ಜಿಲ್ಲಾಡಳಿತ ಮತ್ತು ರಾಜ್ಯಾಡಳಿತ ರೈತರನ್ನು ಕಾಪಾಡಬೇಕು. ಸರ್ಕಾರದ ಡಾ.ಬಸವರಾಜ್ ತಾಂತ್ರಿಕ ಸಮಿತಿಯ ವರದಿಯಂತೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರೋತ್ಸಾಹಶನವನ್ನು ಕೊಡಬೇಕೆಂದು ವಿನಂತಿಸುತ್ತೇವೆ ಎಂದರು.
ರೀಲರುಗಳ ಪರವಾಗಿ ಮಾತನಾಡಿದ ಅನ್ಸರ್, ಚೀನಾ ರೇಷ್ಮೆಯ ಬೆಲೆಯ ಅರ್ಧದಷ್ಟು ಬೆಲೆಗೆ ನಮ್ಮ ರೇಷ್ಮೆ ಬೆಲೆ ಕುಸಿತ ಕಂಡಿದೆ. ಸರ್ಕಾರದಿಂದ ರೇಷ್ಮೆ ಕೊಂಡು ಅಥವಾ ಅಡಮಾನ ಮಾಡಿಕೊಳ್ಳುವ ಮೂಲಕ ರೇಷ್ಮೆಯ ಬೆಲೆಯ ಸ್ಥಿರತೆ ಕಾಪಾಡಬೇಕು. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ತೂಗುವ ತಕ್ಕಡಿ (ವೇಯಿಂಗ್ ಸ್ಕೇಲ್) ಒಂದೇ ಇದೆ. ಸಂಜೆವರೆಗೂ ಕಾಯಲು ಸಾಧ್ಯವಿಲ್ಲ. ಕೆಲಸ ಬೇಗ ಆಗಲು ಸಿಬ್ಬಂದಿ ಮತ್ತು ವೇಯಿಂಗ್ ಸ್ಕೇಲ್ ಸಂಖ್ಯೆ ಹೆಚ್ಚಿಸಿ. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಶುಚಿತ್ವ ಮತ್ತು ವಾಹನ ನಿಲುಗಡೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅದನ್ನು ನಿರ್ವಹಣೆ ಮಾಡಲು ತಿಳಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೇಷ್ಮೆ ಕುಸಿತವನ್ನು ತಡೆಗಟ್ಟಿ ಉದ್ದಿಮೆಯನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಅವರು, ನಗರದ ಪ್ಯಾರೇಗಾನ್ ಶಾಲೆಯ ಬಳಿಯ ರೇಷ್ಮೆ ನೂಲು ಬಿಚ್ಚಾಣಿಕೆಯ ಘಟಕ್ಕೆ ಹಾಗೂ ದಿಬ್ಬೂರಹಳ್ಳಿಯ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆಯ ಮಲ್ಟಿ ಎಂಡ್ ಘಟಕವನ್ನು ವೀಕ್ಷಿಸಿದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಮಾತನಾಡಿಸಿ ಅವರ ಕೆಲಸ, ವೇತನ ಮತ್ತು ಸಮಸ್ಯೆಗಳನ್ನು ವಿಚಾರಿಸಿದರು. ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿ ಹಾಗೂ ಹನುಮಂತಪುರದ ಬಳಿ ಸ್ಥಳ ಪರಿಶೀಲನೆಯನ್ನು ನಡೆಸಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಅವರು, ವಿವಿಧ ವಿಭಾಗಗಳನ್ನು, ಸ್ವಚ್ಚತೆ, ನೀರು, ಶೌಚಾಲಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ತಾಲ್ಲೂಕು ಕಚೇರಿ, ನಗರಭೆಯ ನೂತನ ಕಟ್ಟಡ ನಿರ್ಮಿಸುವ ಸ್ಥಳ, ಇಂದಿರಾ ಕ್ಯಾಂಟೀನ್, ನಗರಸಭೆ ಉದ್ಯಾನವನ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಹೆಗಡೆ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ. ಎ.ಪಿ.ಎಂ.ಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ರೇಷ್ಮೆ ಉಪನಿರ್ದೇಶಕರಾದ ಸುಭಾಷ್ ಸಾತೇನಹಳ್ಳಿ, ಬೈರಾರೆಡ್ಡಿ, ಸಹಾಯಕ ನಿರ್ದೇಶಕರಾದ ಬೋಜಣ್ಣ, ನರಸಿಂಹಮೂರ್ತಿ, ವಿಸ್ತರಣಾಧಿಕಾರಿಗಳಾದ ರಾಮಕೃಷ್ಣಪ್ಪ, ಕಾಂತರಾಜು, ರೈತಸಂಘದ ತಾದೂರು ಮಂಜುನಾಥ್, ಬಿ.ನಾರಾಯಣಸ್ವಾಮಿ, ವೇಣು, ಕೃಷ್ಣಪ್ಪ, ಮುನಿನಂಜಪ್ಪ, ರಾಮಕೃಷ್ಣಪ್ಪ, ಶ್ರೀರಾಮಪ್ಪ, ಸಿ.ಮೂರ್ತಿ, ಕೆಂಪಣ್ಣ, ರೀಲರುಗಳಾದ ಜಿ.ರೆಹಮಾನ್, ಅಕ್ಮಲ್, ರಾಮಕೃಷ್ಣಪ್ಪ, ಅನಂತು, ಅನ್ವರ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!