Home News ಶುದ್ದ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್‌ ಕಡಿತ – ಮಹಿಳೆಯರಿಂದ ಪ್ರತಿಭಟನೆ

ಶುದ್ದ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್‌ ಕಡಿತ – ಮಹಿಳೆಯರಿಂದ ಪ್ರತಿಭಟನೆ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಶುದ್ದ ಕುಡಿಯುವ ನೀರಿನ ಘಟಕದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿರುವುದರಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದ್ದು, ಗುರುವಾರ ಮಹಿಳೆಯರು ಖಾಲಿ ಕೊಡ ಮತ್ತು ಕ್ಯಾನ್‌ಗಳನ್ನು ಹಿಡಿದುಕೊಂಡು ಪ್ರತಿಭಟಿಸಿದರು.
ಸರ್ಕಾರದಿಂದ ಟೆಂಡರ್‌ ಮೂಲಕ ಅವಕಾಶ ಪಡೆದ ಫಾಂಟಸ್‌ ಕಂಪೆನಿಯು ಶುದ್ದ ನೀರಿನ ಘಟಕವನ್ನು ಅಪ್ಪೇಗೌಡನಹಳ್ಳಿಯಲ್ಲಿ ಒಂದು ವರ್ಷದ ಹಿಂದೆ ಸ್ಥಾಪಿಸಿತ್ತು. ಸರ್ಕಾರದ ನಿಯಮದಂತೆ ಐದು ವರ್ಷಗಳ ಕಾಲ ಕಂಪೆನಿಯೇ ಅದರ ನಿರ್ವಹಣೆ ಮಾಡಬೇಕು. ವಿದ್ಯುತ್‌ ಮೀಟರನ್ನು ಅಳವಡಿಸಬೇಕಿದೆ. ಆದರೆ ಒಂದು ವರ್ಷವಾದರೂ ವಿದ್ಯುತ್‌ ಮೀಟರ್‌ ಅಳವಡಿಸದ ಕಾರಣ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
‘ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮುಂದಿನ ತಿಂಗಳಿಗೆ ಒಂದು ವರ್ಷವಾಗುತ್ತದೆ. ಕಂಪೆನಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಯಂತ್ರದಲ್ಲಿ ಎಟಿಡಬ್ಲೂ ಎಂಬ ಉಪಕರಣ ಕೆಲಸ ಮಾಡುತ್ತಿಲ್ಲ. ಫಿಲ್ಟರ್‌ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬದಲಿಸಬೇಕು. ಆದರೆ ಅದನ್ನು ಬದಲಿಸಿಲ್ಲ. ಯುಬಿ ಫಿಲ್ಟರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲ. ಫಿಲ್ಟರ್‌ ಒಳಗೆ ಪಾಚಿಕಟ್ಟಿದೆ, ಶುಚಿಗೊಳಿಸಿಲ್ಲ. ವಿದ್ಯುತ್‌ ಮೀಟರ್‌ ಅಳವಡಿಸದ ಕಾರಣ ಇದುವರೆಗೂ ಮೂರು ಬಾರಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಬಂದಿದ್ದರು. ನಮ್ಮ ವಿನಂತಿಯನ್ನು ಮನ್ನಿಸಿ ಸುಮ್ಮನಾಗಿದ್ದರು. ಆದರೆ ಎಷ್ಟುಕಾಲ ಅವರು ತಾನೆ ಉಚಿತ ವಿದ್ಯುತ್‌ ನೀಡುತ್ತಾರೆ. ಈಗ ಕಡಿತಗೊಳಿಸಿದ್ದಾರೆ’ ಎಂದು ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ತಿಳಿಸಿದರು.
‘ಗ್ರಾಮ ಪಂಚಾಯಿತಿಯಿಂದ ನಾವು ಶುದ್ದ ನೀರಿನ ಘಟಕಕ್ಕೆ ಸ್ಥಳ ನೀಡಿದ್ದೇವೆ. ವಿದ್ಯುತ್‌ ಮೀಟರ್‌ ಅಳವಡಿಸಲು ಎನ್‌.ಒ.ಸಿ ಪಂಚಾಯಿತಿ ವತಿಯಿಂದ ಕೊಟ್ಟು ಒಂಭತ್ತು ತಿಂಗಳಾಯಿತು. ಆದರೆ ಅದರ ಬಗ್ಗೆ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ಫಾಂಟಸ್‌ ಕಂಪೆನಿಯ ಜಿಲ್ಲಾ ಉಸ್ತುವಾರಿ ವ್ಯವಸ್ಥಾಪಕ ಮೋಹನ್‌ ಅವರನ್ನು ಈ ಬಗ್ಗೆ ಕೇಳಿದರೆ ಅವರು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಕೇಶವಮೂರ್ತಿ ಅವರಿಗೆ ಒಪ್ಪಿಸಿದ್ದೇವೆ ಎನ್ನುವರು. ಕೇಶವಮೂರ್ತಿ ಅವರನ್ನು ಕೇಳಿದಾಗಲೆಲ್ಲಾ ಮಾಡಿಸುತ್ತೇನೆ ಎನ್ನುತ್ತಿರುತ್ತಾರೆ, ಆದರೆ ಏನೂ ಮಾಡಿಲ್ಲ. ಫಾಂಟಸ್‌ ಕಂಪೆನಿಯ ಬೆಂಗಳೂರು ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಸಮಸ್ಯೆಯ ಬಗ್ಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಯಾರ ಬಳಿ ನಾವು ದೂರು ಹೇಳುವುದು’ ಎಂದು ಅವರು ಸಮಸ್ಯೆಯ ಬಗ್ಗೆ ವಿವರಿಸಿದರು.
ಶುದ್ದ ಕುಡಿಯುವ ನೀರಿನ ಘಟಕದ ಮೇಲ್ವಿಚಾರಕರನ್ನಾಗಿ ಗ್ರಾಮದ ವೇಣುಗೋಪಾಲ್‌ ಅವರನ್ನು ಕಂಪೆನಿಯವರು ನೇಮಿಸಿದ್ದಾರೆ. ಅವರನ್ನು ಕೇಳಿದಾಗ, ‘ನನಗೆ ಮೊದಲು ತಿಂಗಳಿಗೆ 2,200 ರೂ ನೀಡುವುದಾಗಿ ಹೇಳಿದ್ದರು. ಆದರೆ ಈಗ ಕೇವಲ 500 ರೂ ಕೊಡುತ್ತಾರೆ ಅಷ್ಟೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ, ಖರ್ಚಿದ್ದರೆ ನಮ್ಮ ಹಳ್ಳಿಯ ಮೂರ್ತಿ ಎಂಬುವವರಿಗೆ ಇದರ ಅನುಭವವಿರುವುದರಿಂದ ಅವರ ಸಹಾಯ ಪಡೆದು ಸರಿಪಡಿಸಿಕೊಳ್ಳುತ್ತೇವೆ. ಕಂಪೆನಿಯ ಮೇಲ್ವಿಚಾರಕ ಮೋಹನ್‌ ಹದಿನೈದು ದಿನಕ್ಕೊಮ್ಮೆ ಬಂದು ಸಂಗ್ರಹವಾದ ಹಣವನ್ನು ತೆಗೆದುಕೊಂಡು ಹೋಗುತ್ತಾರೆ ಅಷ್ಟೇ’ ಎಂದು ಹೇಳುತ್ತಾರೆ.
ಸ್ಮಾರ್ಟ್‌ ಕಾರ್ಡ್‌ ಅಳವಡಿಸುವ ಅವಕಾಶವಿದ್ದರೂ ಇಲ್ಲಿ ಅದನ್ನು ಬಳಕೆ ಮಾಡುತ್ತಿಲ್ಲ. ಸಾಧಾರಣ ಕಾರ್ಡುಗಳನ್ನು ಮುದ್ರಿಸಿ ನೀರು ಪಡೆಯಲು ಬರುವವರಿಂದ ಕಾರ್ಡಿಗೆ 60 ರೂ ಪಡೆದು, ನಂತರ ಪ್ರತಿ 20 ಲೀಟರ್‌ ನೀರಿಗೆ 2 ರೂ ಪಡೆಯಲಾಗುತ್ತಿದೆ.
ಅಪ್ಪೇಗೌಡನಹಳ್ಳಿಯ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀಯರಲ್ಲದೆ, ಕಂಬದಹಳ್ಳಿ, ಗಂಗನಹಳ್ಳಿ, ಚೌಡಸಂದ್ರ, ಮೇಲೂರಿನಿಂದಲೂ ಬಂದು, ಕೆಲವರಂತೂ ಆಟೋದಲ್ಲಿ ಕ್ಯಾನುಗಳನ್ನು ತಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಇವರೇ ಕುಡಿಯುವ ನೀರಿಗಾಗಿ ಬೇರೆ ಕಡೆ ಹೋಗಬೇಕಾಗಿದೆ.
‘ಕಳೆದ ನಾಲ್ಕು ದಿನಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ ಕೊಳವೆ ಬಾವಿಯ ನೀರನ್ನು ಹಾಗೆಯೇ ಬಳಸುತ್ತಿದ್ದೇವೆ. ಆಗಲೇ ಮೈ ಕೈ ಎಲ್ಲಾ ದದ್ದುಗಳು, ಕೆರೆತ ಉಂಟಾಗಿ ಅಲರ್ಜಿ ಆಗಿದೆ. ಮಕ್ಕಳಿಗೆ ಖಾಯಿಲೆಗಳು ಬರುತ್ತಿದ್ದು ಆಸ್ಪತ್ರೆಗೆ ಹೋಗುವಂತಾಗಿದೆ. ಇನ್ನು ನಾವು ಶುದ್ದ ನೀರು ಬೇಕೆಂದರೆ ಹಂಡಿಗನಾಳ, ಕೇಶವಾರ, ಕಡಿಶೀಗೇನಹಳ್ಳಿಗೆ ಹೋಗಿ ಐದು ರೂ ನಾಣ್ಯ ಹಾಕಿ ತರಬೇಕು. ಸರಿಯಾಗಿ ನಿರ್ವಹಣೆ ಮಾಡದೆ ತೊಂದರೆ ಮಾಡಿರುವ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೇ ಕಂಪೆನಿಯವರು ಶುದ್ದ ನೀರಿನ ಘಟಕಗಳನ್ನು ತಾಲ್ಲೂಕಿನ ಸೊಣ್ಣಗಾನಹಳ್ಳಿ, ಬಳುವನಹಳ್ಳಿ, ಕೆ.ಜಿ. ಪುರ, ಬೈಯಪ್ಪನಹಳ್ಳಿಯಲ್ಲೂ ಸ್ಥಾಪಿಸಿದ್ದು, ಅಲ್ಲೂ ಹಲವು ಸಮಸ್ಯೆಗಳಿವೆ. ಇದು ಹೀಗೆ ಮುಂದುವರಿದರೆ ಸ್ತ್ರೀ ಶಕ್ತಿ ಸದಸ್ಯರೆಲ್ಲಾ ತಾಲ್ಲೂಕು ಆಡಳಿತದ ಮುಂದೆ ಪ್ರತಿಭಟಿಸುತ್ತೇವೆ’ ಎಂದು ಗ್ರಾಮದ ರತ್ನಮ್ಮ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಕಮಲಮ್ಮ, ಭಾರತಮ್ಮ, ರಾಧಾ, ಶೋಭಾ, ಸೌಮ್ಯ, ಶೈಲಜ ಹಾಜರಿದ್ದರು.