Home News ಶುಲ್ಕ ವಸೂಲಿ ವಿರುದ್ಧ ರೈತರ ಪ್ರತಿಭಟನೆ

ಶುಲ್ಕ ವಸೂಲಿ ವಿರುದ್ಧ ರೈತರ ಪ್ರತಿಭಟನೆ

0

ರೇಷ್ಮೆ ಗೂಡಿನ ಮಾರುಕಟ್ಟೆಗೆ ಗೂಡುಗಳನ್ನು ಹೊತ್ತು ತರುವಂತಹ ವಾಹನಗಳಿಂದ ಪುರಸಭೆಯವರು ಶುಲ್ಕ ವಸೂಲಿ ಮಾಡುವ ಕ್ರಮವನ್ನು ವಿರೋಧಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿದೆಡೆಯಿಂದ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗೂಡುಗಳನ್ನು ಹೊತ್ತು ತರುವಂತಹ ವಾಹನಗಳಿಂದ ಪುರಸಭೆಯಿಂದ ವಸೂಲಿ ಮಾಡುತ್ತಿದ್ದ ಶುಲ್ಕದ ಟೆಂಡರ್‌ನ್ನು ಕಳೆದ ಏಪ್ರಿಲ್ ನಿಂದ ನಿಲ್ಲಿಸಿದ್ದರು. ಆದರೆ ಇದೀಗ ರೈತರ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಷಡ್ಯಂತ್ರ ರೂಪಿಸಿರುವ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಅವರ ಕ್ರಮ ವಿರೋಧಿಸಿ ರೈತರು ಪ್ರತಿಭಟಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ರೈತರ ಗೂಡುಗಳನ್ನು ಹೊತ್ತುತರಲು ನೂರಾರು ವಾಹನಗಳು ಬರುತ್ತವೆ. ಹೀಗೆ ಬಂದ ವಾಹನಗಳಿಂದ ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಹಣ ವಸೂಲಿ ಮಾಡುವುದಿಲ್ಲ. ಶಿಡ್ಲಘಟ್ಟದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಗೆ ಯಾವುದೇ ಮೂಲಭೂತ ಸವಲತ್ತುಗಳನ್ನು ಒದಗಿಸದ ಪುರಸಭೆಯವರು ಹಣ ವಸೂಲಿ ಮಾಡುವುದನ್ನು ಈ ಹಿಂದೆ ರೈತರು ಸೇರಿದಂತೆ ರೀಲರ್‌ಗಳು ಪ್ರತಿಭಟಿಸಿದ್ದರು. ಕಳೆದ ಮಾರ್ಚ್ ತಿಂಗಳ ಅಂತ್ಯಕ್ಕೆ ಶುಲ್ಕ ವಸೂಲಿ ಮಾಡುವುದನ್ನು ಪುರಸಭೆ ಅಧಿಕಾರಿಗಳು ಕೈಬಿಟ್ಟಿದ್ದರು.
ಆದರೆ ಇದೀಗ ಸೆಪ್ಟೆಂಬರ್‌ ೩೦ ರಂದು ನಡೆಯಲಿರುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪೈಕಿ ಈ ಮೇಲ್ಕಂಡ ವಿಷಯವನ್ನು ಸೇರಿಸಿ ರೈತರಿಗೆ ಮೋಸ ಮಾಡಲು ಹೊರಟಿರುವ ಮುಖ್ಯಾಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಈಗಾಗಲೇ ತೀವ್ರ ಬರಗಾಲದಿಂದಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಹಾಯಕ್ಕೆ ಬರಬೇಕಾದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ರೈತರನ್ನು ಸುಲಿಗೆ ಮಾಡಲು ಮುಂದಾಗಿರುವುದು ವಿಪರ್ಯಾಸ ಎಂದ ಪ್ರತಿಭಟನಾಕಾರರು, ಈ ಕೂಡಲೇ ರೈತರಿಂದ ಶುಲ್ಕದ ರೂಪದಲ್ಲಿ ವಸೂಲಿ ಮಾಡಲೊರಟಿರುವ ಕ್ರಮ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಸೇರಿದಂತೆ ರೀಲರ್‌ಗಳು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಮಾತನಾಡಿ, ಮಾರುಕಟ್ಟೆಯ ಬಳಿ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಈಗಾಗಲೇ ನಿಲ್ಲಿಸಲಾಗಿದ್ದು, ಕಳೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಬಂದಿತ್ತಾದರೂ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿರ್ದಾರ ವ್ಯಕ್ತವಾಗಿತ್ತು. ಹಾಗಾಗಿ ನಾಳೆಯ ಸಭೆಯಲ್ಲಿ ಚರ್ಚಿಸುವ ವಿಷಯಗಳಲ್ಲಿ ಇದನ್ನು ಸೇರಿಸಲಾಗಿದೆಯೇ ಹೊರತು ಇದರಲ್ಲಿ ರೈತರಿಗೆ ಅನ್ಯಾಯ ಮಾಡುವ ಉದ್ದೇಶವಿಲ್ಲ. ಇನ್ನು ಈಗ ರೈತರು ನೀಡಿರುವ ಮನವಿಯನ್ನು ನಾಳಿನ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಆಂಜನೇಯರೆಡ್ಡಿ, ಕಾರ್ಯದರ್ಶಿ ಟಿ.ಕೃಷ್ಣಪ್ಪ, ಬೋದಗೂರು ಮುನಿರಾಜು, ಟಿ.ಆರ್.ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.