Home News ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬದಾಚರಣೆ

ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬದಾಚರಣೆ

0

ನಗರದ ಈದ್ಗಾ ಮೈದಾನದಲ್ಲಿ ರಂಜಾನ್‌ ಹಬ್ಬದ ಪ್ರಯುಕ್ತ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿದರು.
ಈದ್ಗಾ ಮೈದಾನದ ಕಾಂಪೌಂಡ್‌ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಹತ್ತು ಲಕ್ಷ ರೂಗಳನ್ನು ನೀಡುತ್ತಿದ್ದು, ಒಂದು ವಾರದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆಯ ವತಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಶ್ರೀಗಂಧದ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿ ಶ್ರೀಗಂಧದ ರೀತಿಯಲ್ಲಿ ಸುವಾಸನೆಯನ್ನು ಬೀರುವ ಸಂಬಂಧ ಸಮಾಜದಲ್ಲಿ ಬೆಳೆಯಲಿ. ಸೌಹಾರ್ಧಯುತ ಸಮಾಜ ನಮ್ಮದಾಗಲಿ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಶ್ರೀಗಂಧದ ಸಸಿಗಳನ್ನು ವಿತರಿಸಿ ಮಾತನಾಡಿ, ‘ಪವಿತ್ರ ಗ್ರಂಥ ಕುರ್ಆನ್ ರಚನೆ ಆರಂಭಗೊಂಡಿದ್ದು ರಂಜಾನ್ ತಿಂಗಳಿನಲ್ಲಿ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ತಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಬಡವರಿಗೆ ದಾನ ಮಾಡುವ ಉದಾತ್ತ ಹಬ್ಬವಿದು. ಸಮಾಜದಲ್ಲಿ ಸೌಹಾರ್ಧತೆಗೆ ಪ್ರತೀಕವಾದ ಈ ಹಬ್ಬ ಐಕ್ಯತೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿ’ ಎಂದು ಮುಸ್ಲೀಂ ಬಾಂಧವರಿಗೆ ಶುಭಾಶಯ ಕೋರಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಧರ್ಮಗುರುಗಳು ಬೋಧನೆ ಮಾಡಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತಿ ಬೇಧವಿಲ್ಲದೆ ಬಡವರಿಗೆ ದಾನ ನೀಡಿದರು.
ಹಿಂದು ಸ್ವಾಮಿಯಿಂದ ಬಡವರಿಗೆ ದಾನ
ರಂಜಾನ್‌ ಹಬ್ಬದಂದು ಮುಸ್ಲೀಮರು ದಾನ ಮಾಡುವುದು ಸಹಜ. ಆದರೆ ನಗರದ ಈದ್ಗಾ ಮೈದಾನಕ್ಕೆ ಹಳದಿ ಕಚ್ಚೆ ಪಂಚೆ, ಮೇಲು ದೋತರ, ನಾಮವನ್ನಿಟ್ಟುಕೊಂಡಿದ್ದ ಹಿಂದು ಸ್ವಾಮಿಯೊಬ್ಬರು ಆಗಮಿಸಿ ವಸ್ತ್ರ, ಹಣ, ಬಿಸ್ಕತ್‌ ಮುಂತಾದ ತಿನಿಸುಗಳನ್ನು ದಾನ ಮಾಡುತ್ತಿದ್ದುದು ವಿಶೇಷವೆನಿಸಿತು. ಅವರನ್ನು ಮಾತನಾಡಿಸಿದಾಗ, ‘ನನ್ನ ಹೆಸರು ಮುರಳೀಧರ. ವೃತ್ತಿಯಲ್ಲಿ ನಾನೊಬ್ಬ ವಕೀಲ ನನ್ನ ಮೂಲಸ್ಥಳ ದಾವಣಗೆರೆ. ಶಿಡ್ಲಘಟ್ಟದ ರಾಮರ ದೇವಸ್ಥಾನದ ಅರ್ಚಕರ ಮಗಳನ್ನು ವಿವಾಹವಾಗಿದ್ದೇನೆ. ನನ್ನ ಅಜ್ಜನ ಕಾಲದಿಂದಲೂ ನಮ್ಮೂರಿನಲ್ಲಿ ರಂಜಾನ್‌ ಹಬ್ಬದಂದು ಮಸೀದಿಗೆ ಅಕ್ಕಿಯನ್ನು ನೀಡುವುದು, ಅವರ ಪ್ರಾರ್ಥನೆಯ ನಂತರ ದಾನ ನೀಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾ ನಮ್ಮ ಪಾಪಗಳನ್ನು ತೊಳೆದುಕೊಳ್ಳುವ ಕೆಲಸವಿದು. ಈ ಬಾರಿ ಇಲ್ಲಿ ಸೇವೆಯನ್ನು ಮಾಡಿದ್ದೇನೆ’ ಎಂದು ವಿವರಿಸಿದರು.
ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ನಗರಸಭೆ ಆಯುಕ್ತ ಚಲಪತಿ, ಸುಬ್ರಮಣಿ, ಸಯ್ಯದ್‌, ತಾಜ್‌ಪಾಷ, ರಾಜ್‌ಕುಮಾರ್‌, ಬಾಲಕೃಷ್ಣ, ಮಧು, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್‌ಗಳಾದ ನವೀನ್‌, ಪ್ರದೀಪ್‌ಪೂಜಾರಿ ಹಾಜರಿದ್ದರು

error: Content is protected !!