ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಎಂದು ಬೆಳ್ಳಾವಿ ಸಂಸ್ಥಾನ ಮಠದ ಮಹಂತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ನಡೆದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿ ಅವರು ಮಾತನಾಡಿದರು.
ನಾವಾಡುವ ಸರಳ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ, ನಿರ್ದಯಿ ಹೃದಯದವರೂ ತಮ್ಮನ್ನೊಮ್ಮೆ ಪರಿಶೀಲಿಸಿಕೊಳ್ಳುವಂತೆ, ತಮ್ಮ ವಚನಗಳ ಮೂಲಕ ಜನರ ಮನಃಪರಿವರ್ತನೆ ಮಾಡಿದ ಮಹಾನ್ ಮಾನವತಾವಾದಿ, ವಿಶ್ವಮಾನವ ಜಗಜ್ಯೋತಿ ಬಸವೇಶ್ವರರು ಪ್ರಪಂಚಕ್ಕೆ ಆದರ್ಶಪ್ರಾಯರಾಗಿದ್ದಾರೆ. ಕಾಯಕಕ್ಕೆ ದೈವಿಕತ್ವ ನೀಡಿದ ಬಸವೇಶ್ವರರು `ಕಾಯಕವೇ ಕೈಲಾಸ’ ಎಂದರು. ಬಸವಣ್ಣನವರ ಕಾಯಕ ತತ್ವವು ದಾಸೋಹ ಕಲ್ಪನೆಯನ್ನು ಹೊಂದಿದ್ದು ತ್ಯಾಗ, ದಾನ, ಸಮಾನ ಹಂಚಿಕೆ, ಅಹಂಕಾರ ತ್ಯಜಿಸುವುದು, ಶರಣಾಗತಿಯಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದೆ.
ಬಸವಣ್ಣನವರ ಪ್ರಕಾರ ಕಾಯಕ ಮಾಡುವುದು ಒಂದು ನೈತಿಕ ಬದ್ಧತೆ, ಪ್ರತಿಯೊಬ್ಬರೂ ತನ್ನ ಅನ್ನವನ್ನು ದುಡಿದು ತಿನ್ನಬೇಕು. `ರಟ್ಟೆ ಮುರಿದು ದುಡಿದು ತಿನ್ನುವಂತಹ ರೊಟ್ಟಿಯು ಅಮೃತಕ್ಕಿಂತ ಶ್ರೇಷ್ಠವಾದದ್ದು’. ಕಾಯಕ ತತ್ವದ ಮೂಲಕ ಬಸವೇಶ್ವರರು ಪ್ರತಿಯೊಬ್ಬರಿಗೂ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಬದುಕಲು ಕರೆ ನೀಡಿದರು ಎಂದು ಹೇಳಿದರು.
ಶಾಸಕ ಎಂ. ರಾಜಣ್ಣ ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಸಾರಿದ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜನಾಂಗ ಬಸವಣ್ಣನವರ ತತ್ವ, ಆದರ್ಶಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ವಚನ ಸಿಂಚನ ಕಾರ್ಯಕ್ರಮದಲ್ಲಿ ವಚನ ಗಾಯನ ಏರ್ಪಡಿಸಲಾಗಿತ್ತು. ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ನಗರದ ತಾಲೂಕು ಕಚೇರಿಯಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮುಖಂಡರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ನಂದೀಶ್, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅನುಸೂಯಮ್ಮ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಜಗದೀಶ್, ನಿರಂಜನ್‍ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.