ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಗ್ರಾಮದ ವಿವಿಧ ಸಂಘಸಂಸ್ಥೆಗಳು, ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು, ಶ್ರೀ ಶಿವಕುಮಾರಸ್ವಾಮೀಜಿ ಭಕ್ತವೃಂದ ವತಿಯಿಂದ ಹಮ್ಮಿಕೊಂಡಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಕಾಯಕದ ಮೂಲಕ ಕೃತಿರೂಪಕ್ಕಿಳಿಸಿದ ಮಹಾಚೇತನವಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾಯಕ ಪದಕ್ಕೆ ಹೊಸಭಾಷ್ಯವನ್ನು ಬರೆದವರು ಶ್ರೀ ಶಿವಕುಮಾರಮಹಾಸ್ವಾಮೀಜಿ. ಅವರಲ್ಲಿ ದೃಷ್ಟಿಕಾಯಕ ಕಂಗೊಳಿಸಿದರೆ, ಮನಸ್ಸಿನಲ್ಲಿ ಕಾಯಕ ಮೈದುಂಬಿತ್ತು. ಕಿವಿಗೆ ಒಗ್ಗುವ ಧ್ವನಿಕಾಯಕ, ನುಡಿಗೆ ಬೆಂಬಲಿಸುವ ನಡೆಕಾಯಕದ ದಿಗ್ದರ್ಶನ ಅವರಿಂದಾಗುತ್ತಿತ್ತು. ಶರಣರ ನುಡಿಯನ್ನು ಕಾಯಕದ ಮೂಲಕ ಕಾಯಕ್ಕೆ ವಿಶೇಷ ಅರ್ಥ ತಂದವರು ಎಂದು ಬಣ್ಣಿಸಿದರು.
ಮಠಕ್ಕೆ ಬಂದ ಪ್ರತಿ ವಿದ್ಯಾರ್ಥಿಗೆ ಜೀವನೋಪಾಯ ಮಾರ್ಗವನ್ನು ಕಲ್ಪಿಸಿ ಬದುಕಿನ ಮಾರ್ಗವನ್ನು ತೋರಿದ ದಯಾಮಯಿ ಸ್ವಾಮೀಜಿ. ಅವರಲ್ಲಿ ಬಂದಿದ್ದ ದೈವದತ್ತವಾದ ಧಾರ್ಮಿಕ ಪ್ರವೃತ್ತಿಗಳು ಸಿದ್ಧಗಂಗೆಯಲ್ಲಿನ ನಿರಂತರವಾದ ಸಾಂಸ್ಕೃತಿಕ ಧಾರ್ಮಿಕ ಕಾರ್ಯಗಳಿಗೆ ಪ್ರೇರಣೆ ನೀಡುವಂತಿತ್ತು ಎಂದರು.
ಅದ್ದೂರಿ ಪಲ್ಲಕ್ಕಿ ಉತ್ಸವ: ಸ್ವಾಮೀಜಿ ಅವರ ಭಾವಚಿತ್ರವನ್ನೊತ್ತ ಮುತ್ತಿನ ಪಲ್ಲಕ್ಕಿ ಉತ್ಸವವು ಸುಗಟೂರು, ಜಂಗಮಕೋಟೆ, ಜಂಗಮಕೋಟೆ ಕ್ರಾಸ್‌ನ ಪ್ರಮುಖ ಬೀದಿಗಳಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಕುಂಭ, ಗಂಗಾಧರ್ ತಂಡದವರಿಂದ ವೀರಗಾಸೆ ನೃತ್ಯ, ಕರಡಿಮಜಲು ವಾದ್ಯಗೋಷ್ಟಿಯೊಂದಿಗೆ ಸಂಚರಿಸಿತು. ಗ್ರಾಮದಲ್ಲಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೇವಾಲಯಗಳಲ್ಲಿ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ಪ್ರಯುಕ್ತ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಪದ್ಮಮ್ಮಅಶ್ವತ್ಥಪ್ಪ, ಎಸ್.ಡಿ.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ಶಂಕರಪ್ಪ, ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ತಿರುಮಲೇಶ್, ಪಿಳ್ಳಪ್ಪ, ಚಿಕ್ಕಬಸವರಾಜು, ಚನ್ನಬಸವರಾಜು, ವರ್ತಕ ಸತೀಶ್, ಎಸ್.ಎ.ನಾಗೇಶ್‌ಗೌಡ, ಸ್ವಾಮೀಜಿ ಅವರ ಭಕ್ತಸಮೂಹ ಹಾಜರಿದ್ದರು.